Ad Widget

ಕಾರ್ಪಲ್ ಟನೆಲ್ ಸಿಂಡ್ರೋಮ್

. . . . . . . . .

✍️ಡಾ|| ಮುರಲೀ ಮೋಹನ್ ಚೂಂತಾರು

ಇದೊಂದು ನರಗಳಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು ನರದ ಮೇಲೆ ಬೀಳುವ ಒತ್ತಡದಿಂದಾಗಿ ಕೈ, ಮುಂಗೈ ಮತ್ತು ತೋಳುಗಳಲ್ಲಿ ನೋವು, ಮರಗಟ್ಟಿದ ಅನುಭವ ಅಥವಾ ಇರುವೆ ಹಿಡಿದಂತಹಾ ಅನುಭವ ಉಂಟಾಗುತ್ತದೆ. ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ ಸುಮಾರು 10 ಮಿಲಿಯನ್ ಮಂದಿ ಈ ತೊಂದರೆಯಿಂದ ಬಳಲುತ್ತಾರೆ. ಬಹಳ ಸುಲಭವಾಗಿ ಗುರುತಿಸಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗ ಇದಾಗಿದ್ದು, ಎಲುಬು ತಜ್ಞರು ಈ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಮಿಡಿಯನ್ ನರ್ವ್ ಕಂಪ್ರೇಶನ್ ಎಂದೂ ಈ ರೋಗವನ್ನು ಕರೆಯುತ್ತಾರೆ. ರೋಗದ ಲಕ್ಷಣದಿಂದಲೇ ಈ ರೋಗವನ್ನು ಗುರುತಿಸಬಹುದಾಗಿದ್ದು, ಅತ್ಯಾಧುನಿಕ ರಕ್ತ ಪರೀಕ್ಷೆ ಅಥವಾ ಇನ್ಯಾವುದೇ ಕ್ಷಕಿರಣ ಸಂಬಂಧಿ ಪರೀಕ್ಷೆಗಳ ಅಗತ್ಯ ಈ ರೋಗಕ್ಕೆ ಇರುವುದಿಲ್ಲ. ಮಿಡಿಯನ್ ನರ್ವ್ ಕೈಯ ಉದ್ದಕ್ಕೂ ಬಾಚಿಕೊಂಡಿದ್ದು ಮಣಿ ಕಟ್ಟಿನ ಒಳಭಾಗದಲ್ಲಿ ಅಂದರೆ ಮುಂಗೈಯ ಒಳಭಾಗದಲ್ಲಿ ಇರುವ ಕಾರ್ಪೆಲ್ ಟನೆಲ್ ಎಂಬ ಕಿರಿದಾದ ಸುರಂಗದಂತಹ ಕಿಂಡಿಯ ಮುಖಾಂತರ ಹಾದು ಹೋಗಿ ಅಂಗೈಯ ಒಳಭಾಗದ ಮುಖಾಂತರ ಹೆಬ್ಬೆರಳು, ಮಧ್ಯದ ಬೆರಳು ಮತ್ತು ಇತರ ಬೆರಳುಗಳಿಗೆ ಸಂವೇದನೆಗೆ ಸಹಾಯ ಮಾಡುತ್ತದೆ. ಕಾರಣಾಂತರಗಳಿಂದ ಈ ಕಾರ್ಪೆಲ್ ಕಿಂಡಿ ಕಿರಿದಾಗಿ ನರದ ಮೇಲಿನ ಒತ್ತಡ ಜಾಸ್ತಿಯಾಗಿ, ನೋವು, ನಿಶ್ಯಕ್ತಿ, ಮರಗಟ್ಟಿದಂತಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹೈಪೋಥೈರಾಯಿಡಿಸಮ್, ದೇಹದಲ್ಲಿ ಅತಿಯಾದ ಕೊಬ್ಬು ಮತ್ತು ಹೆಚ್ಚಾದ ತೂಕ, ರುಮಟಾಯ್ಡ್ ಆರ್ಥೆಟೈಸ್ ಮಧುಮೇಹ, ಗರ್ಭಿಣಿಯರಲ್ಲಿ ಈ ಕಾರ್ಪೆಲ್ ಕಿಂಡಿ ರೋಗ ಜಾಸ್ತಿ ಕಂಡು ಬರುತ್ತದೆ. ನಿರಂತರವಾಗಿ ಮುಂಗೈಯಲ್ಲಿ ಚಲನೆ ಉಂಟು ಮಾಡುವ ಟೈಫಿಂಗ್ ಅಥವಾ ಇನ್ಯಾವುದೇ ಕೆಲಸಗಳಿಂದಲೂ ಈ ಕಾರ್ಪೆಲ್ ಟನೆಲ್ ಸಿಂಡ್ರೋಮ್ ಬರುವ ಸಾಧ್ಯತೆ ಇರುತ್ತದೆ.

ರೋಗದ ಲಕ್ಷಣಗಳು ಏನು?

  1. ಅಂಗೈಯ ಒಳಭಾಗದಲ್ಲಿ ಹೆಬ್ಬೆರಳು, ಮಧ್ಯದ ಬೆರಳು ಮತ್ತು ಇಂಡೆಕ್ಸ್ ಬೆರಳುಗಳ ಭಾಗದಲ್ಲಿ ಉರಿದಂತಹ ಅನುಭವ, ಮರಗಟ್ಟಿದ ಅನುಭವ ಅಥವಾ ಇರುವೆ ಹರಿದಂತಹಾ ಅನುಭವ ಆರಂಭದಲ್ಲಿ ಕಂಡು ಬರುತ್ತದೆ.
  2. ನಿಮ್ಮ ಕೈ ಬೆರಳುಗಳು ಮರಗಟ್ಟಿದಂತೆ, ಅಥವಾ ಮಲಗಿದಂತೆ ಅನುಭವ ಉಂಟಾಗುತ್ತದೆ. ರಾತ್ರಿ ಹೊತ್ತು ಈ ಅನುಭವ ಜಾಸ್ತಿ ಇರುತ್ತದೆ. ಸಂಜೆ ಹೊತ್ತು ನೀವು ಕೆಲಸ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿಯೂ ಇದೇ ರೀತಿ ಅನುಭವ ಉಂಟಾಗುತ್ತದೆ.
  3. ಬೆಳಿಗ್ಗೆ ಏಳುವಾಗ ನಿಮ್ಮ ಹೆಬ್ಬೆರಳು, ಕೈಯ ಒಳಭಾಗ ಪೂರ್ಣವಾಗಿ ಮರಗಟ್ಟಿದಂತಾಗಿರುತ್ತದೆ. ಅದು ನಿಮ್ಮ ಅಂಗೈನಿಂದ, ಮಣಿಗಂಟು ದಾಟಿ ತೋಳುಗಳ ಮತ್ತು ಭುಜಗಳವರೆಗೂ ವಿಸ್ತಿರಿಸಬಹುದು.
  4. ಮುಂದುವರಿದ ಹಂತದಲ್ಲಿ ಕೈಯಲ್ಲಿನ ಸ್ನಾಯುಗಳು ಕುಗ್ಗಿ ಹೋಗಿ ಕೈ ಬೆರಳು ಮತ್ತು ಕೈಯಲ್ಲಿನ ಹಿಡಿತ ಸಡಿಲವಾಗುತ್ತದೆ. ನೋವು, ಸ್ನಾಯು ಸೆಳೆತ ಕೂಡಾ ಜಾಸ್ತಿಯಾಗುತ್ತದೆ.
  5. ಮುಂದುವರಿದ ಕೈ ಬೆರಳು ಮತ್ತು ಹೆಬ್ಬೆರಳುಗಳಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ದೈನಂದಿನ ಚಟುವಟಿಕೆಗಳಿಗೆ ಬಹಳ ತೊಂದರೆ ಉಂಟಾಗುತ್ತದೆ.
    ಮಹಿಳೆಯರಲ್ಲಿ ಈ ಸಿಂಡ್ರೋಮ್ ಪುರುಷರಿಗಿಂತ ಮೂರು ಪಟ್ಟು ಜಾಸ್ತಿ ಕಂಡು ಬರುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಮಹಿಳೆಯರಲ್ಲಿ ಈ ಕಾರ್ಪೆಲ್ ಕಿಂಡಿಯ ಗಾತ್ರ ಪುರುಷರಿಗಿಂತ ಕಿರಿದಾಗಿ ಇರುತ್ತದೆ. ಸಾಮಾನ್ಯವಾಗಿ ಮಹಿಳೆಯಲ್ಲಿ ಗರ್ಭಾವಸ್ಥೆಯ ಸಂದರ್ಭದಲ್ಲಿ ಈ ರೋಗ ಕಾಣಿಸಿಕೊಂಡಲ್ಲಿ, ಮಗು ಹುಟ್ಟಿದ ಮೂರು ನಾಲ್ಕು ತಿಂಗಳುಗಳ ಬಳಿಕ ಸಹಜ ಸ್ಥಿತಿಗೆ ಬರುತ್ತದೆ. ಸಾಮಾನ್ಯವಾಗಿ ಮಣಿಗಂಟಿನ ಮೇಲೆ ಹೆಚ್ಚಾಗಿ ಒತ್ತಡ ಬೀಳುವ ಕೆಲಸ ಮಾಡುವ ಹೊಲಿಗೆ ಕೆಲಸದವರು, ಬಟ್ಟೆ ನೇಯುವವರು, ಬೇಕರಿ ಕೆಲಸದವರು, ಕ್ಯಾಷಿಯರ್, ಕೇಶರಾಶಿ ವಿನ್ಯಾಸಕರು, ಸಂಗೀತಕಾರರು ಮುಂತಾದವರಿಗೆ ಈ ಕಾರ್ಪೆಲ್ ಟನೆಲ್ ಸಿಂಡ್ರೋಮ್ ಹೆಚ್ಚು ಕಂಡು ಬರುವ ಸಾಧ್ಯತೆ ಇರುತ್ತದೆ.

ಪತ್ತೆ ಹಚ್ಚುವುದು ಹೇಗೆ? :-

ಫಾಲೆನ್ಸ್ ಪರೀಕ್ಷೆ ಎಂಬ ವಿಧಾನದ ಮುಖಾಂತರ ಈ ರೋಗವನ್ನು ಪತ್ತೆಹಚ್ಚಲಾಗುತ್ತದೆ. ನಿಮ್ಮ ಎದೆಯ ಮುಂಭಾಗದಲ್ಲಿ ನೇರವಾಗಿ ಕೈಗಳನ್ನು ಚಾಚಿ ಇಡಬೇಕು ಮತ್ತು ಹಿಂಭಾಗಕ್ಕೆ ಒಂದು ನಿಮಿಷಗಳ ಕಾಲ ಜೋತು ಬಿಡಬೇಕು. ಹೀಗೆ ಮಾಡಿದಾಗ ನಿಮ್ಮ ಕೈಗಳಲ್ಲಿ, ಬೆರಳುಗಳಲ್ಲಿ ನೋವು, ಮರಗಟ್ಟಿದ ಅನುಭವ ಅಥವಾ ಇರುವೆ ಹರಿದಂತಹ ಅನುಭವವಾದಲ್ಲಿ ನಿಮಗೆ ಕಾರ್ಪಲ್ ಟನೆಲ್ ಸಿಂಡ್ರೋಮ್ ಇದೆ ಎಂದರ್ಥ. ಈ ಪರೀಕ್ಷೆಯನ್ನು ವೈದ್ಯರು ಸಾಮಾನ್ಯವಾಗಿ ನಿಮ್ಮ ಎದುರೆ ಮಾಡಿಸಿ ನಿಮಗೆ ಈ ಸಿಂಡ್ರೋಮ್ ಇದೆ ಎಂದು ಖಚಿತ ಪಡಿಸುತ್ತಾರೆ.

ಚಿಕಿತ್ಸೆ ಹೇಗೆ? :-

  1. ಜೀವನಶೈಲಿ ಬದಲಾವಣೆ :- ಪದೇ ಪದೇ ನಿಮ್ಮ ಮಣಿಗಂಟಿನ ಮೇಲೆ ನಿರಂತರ ಒತ್ತಡ ಬೀಳುವ ಕೆಲಸವನ್ನು ಸಾಧ್ಯವಾದಷ್ಟೂ ಕಡಮೆ ಮಾಡಿ. ಮಾಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಕೆಲಸದ ನಡುವೆ ವಿಶ್ರಾಂತಿ ಪಡೆಯಿರಿ. ಕೆಲವೊಮ್ಮೆ ಕೈ ವಿಸ್ತರಿಸುವ ಮತ್ತು ಕೈಯಲ್ಲಿನ ಸ್ನಾಯುಗಳನ್ನು ಬಲ ಪಡಿಸುವ ಕೆಲವೊಂದು ಕಸರತ್ತುಗಳನ್ನು ವೈದ್ಯರ ಸೂಚನೆಯಂತೆ ಮಾಡತಕ್ಕದ್ದು,
  2. ಮಣಿಕಟ್ಟಿಗೆ ಪೂರ್ಣ ವಿಶ್ರಾಂತಿ :- ನಿಮ್ಮ ವೈದ್ಯರು ಮಣಿಗಂಟಿಗೆ ಪೂರ್ಣ ವಿಶ್ರಾಂತಿ ನೀಡುವ ಸಲುವಾಗಿ ಮತ್ತು ಮಣಿಗಂಟು ಅಲುಗಾಡುದಂತೆ ಮಾಡಲು ರಾತ್ರಿ ಹೊತ್ತು ಬಳಸುವ ಸ್ಪ್ಲಿಂಟ್ ಎಂಬ ಸಾಧನವನ್ನು ಬಳಸಲು ಸೂಚಿಸುತ್ತಾರೆ. ಈ ರೀತಿ ರಾತ್ರಿ ಹೊತ್ತು ಮಣಿಗಂಟಿಗೆ ಪೂರ್ಣ ವಿಶ್ರಾಂತಿ ನೀಡಿ ಮಿಡಿಯನ್ ನರದ ಮೇಲೆ ಒತ್ತಡ ಬೀರದಂತೆ ಎಚ್ಚರ ವಹಿಸಲಾಗುತ್ತದೆ.
  3. ಔಷಧಿ ಚಿಕಿತ್ಸೆ : ಕೆಲವೊಂದು ನೋವು ನಿವಾರಕ ಔಷಧಿ ಮತ್ತು ನರಗಳ ಉರಿಯೂತ ತಗ್ಗಿಸುವ ಸ್ಟಿರಾಯ್ಡು ಔಷಧಿ ನೀಡಿ ನೋವು ಶಮನ ಮತ್ತು ಮರಗಟ್ಟುವಿಕೆಯನ್ನು ಶಮನಗೊಳಿಸಲಾಗುತ್ತದೆ.
  4. ಶಸ್ತ್ರ ಚಿಕಿತ್ಸೆ :- ಮೇಲೆ ತಿಳಿಸಿದ ಎಲ್ಲಾ ಚಿಕಿತ್ಸೆಗಳಿಗೂ ಯಾವುದೇ ಸ್ಪಂದನ ಸಿಗದಿದ್ದಲ್ಲಿ ಎಲುಬು ತಜ್ಞರು ಶಸ್ತ್ರ ಚಿಕಿತ್ಸೆ ಮಾಡಿ ಮಿಡಿಯನ್ ನರದ ಮೇಲಿನ ಒತ್ತಡ ಬೀಳದಂತೆ ಸೂಕ್ತ ಚಿಕಿತ್ಸೆ ನೀಡುತ್ತಾರೆ.

ತಡೆಯುವುದು ಹೇಗೆ?

  1. ಯಾವತ್ತೂ ಕೆಲಸವಿಲ್ಲದಿದ್ದಾಗ ನಿಮ್ಮ ಮಣಿಗಂಟನ್ನು ನೇರವಾಗಿಡಿ.
  2. ಅನಗತ್ಯವಾಗಿ ನಿರಂತರವಾಗಿ ನಿಮ್ಮ ಮಣಿಗಂಟನ್ನು ಮುಂಭಾಗ ಮತ್ತು ಹಿಂಭಾಗಕ್ಕೆ ಚಲಿಸುತ್ತಲೇ ಇರಬಾರದು.
  3. ನಿಮ್ಮ ಕೆಲಸಗಳು ನಡುವೆ ಪ್ರತಿ ಗಂಟೆಗೊಮ್ಮೆ ಮಣಿಗಂಟಿಗೆ ಒಂದೈದು ನಿಮಿಷಗಳ ವಿಶ್ರಾಂತಿ ನೀಡಿ ಕೆಲಸದ ಸಮಯದಲ್ಲಿ ಕೈ, ಮುಂಗೈ, ಮಣಿಗಂಟನ್ನು ನೇರವಾಗಿ ಇಡಬೇಕು.
  4. ಮಣಿಗಂಟಿಗೆ ರಕ್ತ ಪೂರೈಕೆ ಜಾಸ್ತಿಯಾಗುವ ಕಸರತ್ತುಗಳನ್ನು ಜಾಸ್ತಿ ಮಾಡಿ. ವೈದ್ಯರ ಸಲಹೆಯಂತೆ ಇದನ್ನು ಮಾಡಬೇಕು. ರಾತ್ರಿ ಹೊತ್ತು ಮಣಿಗಂಟಿಗೆ ಪರಿಪೂರ್ಣ ವಿಶ್ರಾಂತಿ ಸಿಗಲು ಸ್ಪ್ಲಿಂಟ್ ಬಳಸಲಾಗುವುದು.

ಕೊನೆಮಾತು

ಸಾಮಾನ್ಯವಾಗಿ ಮಧ್ಯವಯಸ್ಕ ಮಹಿಳೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮಣಿಗಂಟಿನ ನರದ ಮೇಲೆ ಉಂಟಾಗುವ ಒತ್ತಡದಿಂದ ಕಂಡು ಬರುವ ಕಾರ್ಪೆಲ್ ಕಿಂಡಿ ಸಿಂಡ್ರೋಮ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದೆ. 45ರಿಂದ 65ರ ವಯಸ್ಸಿನಲ್ಲೂ ಹೆಚ್ಚು ಕಾಣಿಸಿಕೊಳ್ಳುವ ರೋಗ, ವಯಸ್ಸಾದಂತೆ ಈ ರೋಗದ ಸಾಧ್ಯತೆ ಹೆಚ್ಚುತ್ತದೆ. ಅಮೇರಿಕಾದಲ್ಲಿ ಜನಸಂಖ್ಯೆಯ 3ರಿಂದ 6ಶೇಕಡಾ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಸುಮಾರು 5 ಶೇಕಡಾ ಮಂದಿ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇದು ಒಂದು ಕೈ ಅಥವಾ ಎರಡು ಕೈಯಲ್ಲಿನ ಮಣಿಗಂಟನ್ನು ಬಾಧಿಸುವ ಸಾಧ್ಯತೆಯೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆ ಕೆಲಸಕ್ಕಿಂತ ಜಾಸ್ತಿ, ಮಹಿಳೆಯರು ಕಂಪ್ಯೂಟರ್‍ಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಕೀಬೋರ್ಡ್‍ನಲ್ಲಿ ಕೈಯಾಡಿಸುವುದರಿಂದ ಮಣಿಗಟ್ಟಿನ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ಸಿಂಡ್ರೋಮ್ ಮತ್ತಷ್ಟು ಜಾಸ್ತಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮಣಿಗಂಟಿನ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ತಡೆಯುವ ಮಣಿಗಂಟು ಸ್ಪ್ಲಿಂಟ್‍ಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಂತೆ ಈ ಸಾಧನವನ್ನು ಬಳಸಬಹುದಾಗಿದೆ. ಒಟ್ಟಿನಲ್ಲಿ ಆಧುನಿಕ ಬೆಳೆದಂತೆಲ್ಲಾ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದ್ದು, ಹೆಚ್ಚಿನ ಎಲ್ಲಾ ರೋಗಗಳು ನಮ್ಮ ಜೀವನ ಶೈಲಿಗೆ ಸಂಬಂಧಿಸುವುದಾಗಿರುವುದು ಸಮಾಧಾನಕರ ವಿಚಾರವಾಗಿದೆ. ಅದೇನೇ ಇರಲಿ ಆರಂಭಿಕ ಹಂತದಲ್ಲಿಯೇ ಗುರುತಿಸಿ ಜೀವನಶೈಲಿ ಬದಲಿಸಿ, ವೈದ್ಯರ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಈ ಕಾರ್ಪೆಲ್ ಕಿಂಡಿ ಸಿಂಡ್ರೋಮ್‍ವನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದು. ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!