
ಮಕ್ಕಳಿಗೆ ಮನೆಯ ವಾತಾವರಣದಲ್ಲಿ ಸಂಸ್ಕಾರದ ಅಭ್ಯಾಸಗಳೊಂದಿಗೆ ಪೂರಕ ವಿಚಾರಧಾರೆಗಳನ್ನು ಕಲಿಸುವ ನಿಟ್ಟಿನಲ್ಲಿ ಮಯೂರ ಬಾಲಾಲಯ ಇದರ ಆಶ್ರಯದಲ್ಲಿ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ರವರ ನೇತೃತ್ವದಲ್ಲಿ ಏ.12 ರಿಂದ ಏ.20 ರವರೆಗೆ 09 ದಿವಸಗಳ ಕಾಲ ನಡೆದ “ಮಕ್ಕಳ ಬೇಸಿಗೆ ಶಿಬಿರ” ಕಾರ್ಯಕ್ರಮದ ಸಮಾರೋಪ ಸಮಾರಂಭವು ಏ.20 ರಂದು ನಡೆಯಿತು.ಸಮಾರೋಪ ಸಮಾರಂಭದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ಅನುಭವಗಳ ಬಗ್ಗೆ ಹಾಗೂ ಪೋಷಕರಾದ ಚಂದ್ರಶೇಖರ ಕಡೋಡಿ, ಶ್ರೀಮತಿ ಕುಸುಮಾ ಪೈಕ, ಕವಿತಾ ಪುಚ್ಛಪ್ಪಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ತಮ್ಮ ಮಕ್ಕಳಲ್ಲಾದ ಬದಲಾವಣೆಗಳನ್ನು ತಿಳಿಸಿದರು. ನಂತರ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಧನಂಜಯ ಸುಳ್ಯ ಇವರಿಂದ ಧಾರ್ಮಿಕ ಪ್ರವಚನ ನಡೆಯಿತು.ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಸನಾತನ ಸಂಸ್ಥೆಯ ವಹಿ, ಶ್ರೀ ರಾಮರಕ್ಷಾಸ್ತೋತ್ರ ಪುಸ್ತಕ, ಪುಸ್ತಕ, ಪೆನ್ನು, ಕ್ರೆಯಾನ್ಸ್ ಹಾಗೂ ಪ್ರಮಾಣಪತ್ರ ನೀಡಲಾಯಿತು.ವೇದಿಕೆಯಲ್ಲಿ ಸನಾತನ ಸಂಸ್ಥೆಯ ಸಾಧಕರಾದ ಧನಂಜಯ ಸುಳ್ಯ, ಶೇಷಪ್ಪ ಹಾಗೂ ಭಾರತೀಯ ಭೂಸೇನಾ ಯೋಧರಾದ ರಂಜಿತ್ ಕನ್ಯಾನ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶ್ರೀಮತಿ ಉಷಾ ವೆಂಕಪ್ಪ ಗೌಡ ಗುಡ್ಡೆಮನೆ, ಶ್ರೀಮತಿ ಕುಸುಮಾ ಮಾಧವ ಕನ್ಯಾನ, ಶ್ರೀಮತಿ ದಿವ್ಯ ಸುಪ್ರಿತ್ ಗುಡ್ಡೆಮನೆ, ಕಾರ್ಯಕ್ರಮದ ಆಯೋಜಕರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಉಪಸ್ಥಿತರಿದ್ದರು.ಶ್ರೀಮತಿ ಅಭಿಲಾಷಾ ಮೋಟ್ನೂರು ಕಾರ್ಯಕ್ರಮ ನಿರೂಪಣೆ ಮಾಡಿದರು. ಚೈತನ್ಯ ವಳಲಂಬೆ, ಜೀವಿತಾ ಹಾಗೂ ಮೇಘ ಸಹಕರಿಸಿದರು.ಶಿಬಿರದ ದಿನಗಳಲ್ಲಿ ರಂಜಿತ್ ಕನ್ಯಾನ, ವೆಂಕಪ್ಪ ಗೌಡ ಗುಡ್ಡೆಮನೆ, ಸುಕೇಶ್(ರಾಯಲ್ ಬೇಕರಿ ಗುತ್ತಿಗಾರು), ಪವಿತ್ರ ತುಪ್ಪದಮನೆ, ಕವಿತಾ ಚರಣ್ ಚೈಪೆ, ಕವಿತಾ ಪುಚ್ಛಪ್ಪಾಡಿ, ಶಿವಪ್ರಕಾಶ್ ಮೋಟ್ನೂರು ಇವರುಗಳು ಮಕ್ಕಳಿಗೆ ಲಘು ಉಪಹಾರ ನೀಡಿ ಸಹಕರಿಸಿದರು.ಒಂಬತ್ತು ದಿನಗಳ ಕಾಲ ನಡೆದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳು ಮನೆಯಲ್ಲಿ ಅನುಸರಿಸಬೇಕಾದ ಅಭ್ಯಾಸಗಳು, ಪ್ರಾರ್ಥನೆ, ದೇವರ ನಾಮಜಪ, ಭಜನೆ, ಔಷಧೀಯ ಸಸ್ಯಗಳ ಪರಿಚಯ, ವಿವಿಧ ನೀತಿ ಕಥೆಗಳು, ಆಟಗಳು, ಸ್ವಭಾವ ದೋಷ ನಿವಾರಣೆ ಹಾಗೂ ವಿವಿಧ ರೀತಿಯ ಚಟುವಟಿಕೆಗಳಾದ ಇಡಿಸೂಡಿ ಕಡ್ಡಿ ತಯಾರಿಕೆ, ಮನೆಯಲ್ಲಿ ಗ್ರಂಥಾಲಯ ನಿರ್ಮಾಣ, ಬೆಳಿಗ್ಗೆ ಬೇಗ ಏಳುವುದು, ಹೂಮಾಲೆ ಹಾಗೂ ಹೂಗುಚ್ಛ ಮಾಡುವುದು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಹಾಗೂ ಶುದ್ಧ ಕುಂಕುಮವನ್ನು ಪರಿಶೀಲಿಸುವ ವಿಧಾನ ಮತ್ತು ಕುಂಕುಮ ತಿಲಕ ಹಚ್ಚುವ ಮಹತ್ವವನ್ನು ತಿಳಿಸುವುದರೊಂದಿಗೆ ಶಿಬಿರಕ್ಕೆ ಅತಿಥಿಗಳಾಗಿ ಆಗಮಿಸಿದ ವಿವೇಕ ಜಾಗೃತಿ ಬಳಗದ ಶ್ರೀಮತಿ ಗುಲಾಬಿ ಹರಿಹರ, ಸನಾತನ ಸಂಸ್ಥೆಯ ಸಾಧಕರಾದ ಧನಂಜಯ ಸುಳ್ಯ, ಸುಧೀರ್ ಅಮೆ, ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯದ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ ಮೋಟ್ನೂರು, ವಳಲಂಬೆ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಮತಿ ಅಪೂರ್ವ ಕೊಲ್ಯ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿನ ಚಿತ್ರಕಲಾ ಶಿಕ್ಷಕರಾದ ಶಿವಪ್ರಸಾದ್ ಕುಳ್ಳಂಪಾಡಿ ಹಾಗೂ ಭಾರತೀಯ ಭೂಸೇನಾ ಯೋಧರಾದ ರಂಜಿತ್ ಕನ್ಯಾನ ಇವರುಗಳು ಆಗಮಿಸಿ ಮಕ್ಕಳಿಗೆ ಶ್ರೀ ರಾಮರಕ್ಷಾಸ್ತೋತ್ರ ಪಠಣೆ, ಮಕ್ಕಳು ಮನೆಯಲ್ಲಿ ಅನುಸರಿಸಬೇಕಾದ ಅಭ್ಯಾಸಗಳು, ದೇವರ ಆರಾಧನೆ-ಆಚರಣೆಗಳ ಮಹತ್ವ, ಭಾರತೀಯ ಸೇನೆಯ ಬಗ್ಗೆ, ಹುಟ್ಟುಹಬ್ಬ ಆಚರಿಸುವ ರೀತಿ, ಎಲೆಯಿಂದ ಹೂವು ತಯಾರಿಸಿ ಹೂಗುಚ್ಛ ತಯಾರಿಕೆ, ಪಿಂಗಾರ ಮಾಲೆ ಮಾಡುವ ರೀತಿ, ಗ್ರಂಥಾಲಯದಲ್ಲಿ ಒದಗುವ ಅವಕಾಶಗಳ ಬಗ್ಗೆ ಹಾಗೂ ಅರ್ಲಿಬರ್ಡ್ ಸಂಸ್ಥೆಯ ವಿಶಿಷ್ಟ ಪಕ್ಷಿಲೋಕದ ಕಲ್ಪನೆಯ ಬಗ್ಗೆ, ಅಲಂಕಾರಿಕ ಬಳೆ ಹಾಗೂ ಕಿವಿಯೋಲೆ ತಯಾರಿಕೆ, ಪ್ಲಾಸ್ಟಿಕ್ ನಿಂದ ಹೂವು ತಯಾರಿಕೆ, ಪೇಪರ್ ಕಪ್ ತಯಾರಿಕೆ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಮಕ್ಕಳಿಗೆ ತಿಳಿಸಲಾಯಿತು. ಶಿಬಿರದಲ್ಲಿ ಒಟ್ಟು 21 ಮಕ್ಕಳು ಭಾಗವಹಿಸಿದ್ದರು.