
ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಆಶ್ರಯದಲ್ಲಿ ಸಂಜೀವಿನಿ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಜಿಲ್ಲಾ ಮಟ್ಟದ ಪ್ರದರ್ಶನ ಹಾಗೂ ಮಾರಾಟ ಮೇಳ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ಶನಿವಾರ ನಡೆಯಿತು. ಜಿಲ್ಲೆಯ ವಿವಿಧ ಸಂಜೀವಿನಿ ಒಕ್ಕೂಟಗಳ ಕಾರ್ಯಚಟುವಟಿಕೆಯನ್ನು ಗುರುತಿಸಿ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗಿದ್ದು, ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಕ್ಕೆ ಅತ್ಯುತ್ತಮ ಒಕ್ಕೂಟ ಪ್ರಶಸ್ತಿ ಹಾಗೂ 1 ಲಕ್ಷ ರೂ.ನಗದು ಲಭಿಸಿದೆ. ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷೆ ರಮಿತಾ ಆಚಳ್ಳಿ ಹಾಗೂ ಪದಾಧಿಕಾರಿಗಳು ಪಡೆದುಕೊಂಡರು. ಈ ಮಾರಾಟ ಮೇಳದಲ್ಲಿ ಜಿಲ್ಲೆಯ ವಿವಿಧ ಒಕ್ಕೂಟಗಳ 30 ಮಳಿಗೆಗಳಲ್ಲಿ 70ಕ್ಕೂ ಅಧಿಕ ಉತ್ಪನ್ನಗಳು ಪ್ರದರ್ಶನಗೊಂಡಿದ್ದವು.
ಗುತ್ತಿಗಾರು ಅಮರ ಸಂಜೀವಿನಿ ಮಟ್ಟದ ಒಕ್ಕೂಟದಡಿಯಲ್ಲಿ 40 ಸ್ವಸಹಾಯ ಗುಂಪುಗಳಿದ್ದು, ಹಲವಾರು ಗುಂಪಗಳು ಇದರಿಂದ ಸ್ವ ಉದ್ಯೋಗ ಆರಂಭಿಸಿದೆ. ಹಾಳೆ ತಟ್ಟೆ ತಯಾರಿಕೆ, ಕೋಳಿ ಫಾರ್ಮ್ ನಿರ್ವಹಣೆ ಸೇರಿದಂತೆ ಸ್ವ ಉದ್ಯೋಗ ನಡೆಸುತ್ತಿದ್ದಾರೆ. ಒಕ್ಕೂಟದ ವತಿಯಿಂದ ಪ್ರತಿ ತಿಂಗಳು ಗುತ್ತಿಗಾರು ಪೇಟೆಯ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತ ಬಂದಿದೆ. ಸದಸ್ಯರಿಗೆ ವಿವಿಧ ಸ್ವ ಉದ್ಯೋಗದ ತರಬೇತಿಗಳನ್ನು ಒಕ್ಕೂಟ ನೀಡಿದೆ.