
ಮಂಗಳೂರು ಸೆಂಟ್ರಲ್ ನಿಂದ ಪುತ್ತೂರುವರೆಗೆ ಮಾತ್ರ ಇದ್ದ ಪ್ಯಾಸೆಂಜರ್ ರೈಲು ಸೇವೆಯನ್ನು ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ವಿಸ್ತರಿಸಬೇಕೆಂದು ಮನವಿ ಹೋರಾಟ ನಡೆದರೂ ಬೇಡಿಕೆ ಇಡೇರಿರಲಿಲ್ಲ. ಸಂಸದ ಬ್ರಿಜೇಶ್ ಚೌಟ ರವರ ಪ್ರಯತ್ನದಿಂದ ಸುಬ್ರಹ್ಮಣ್ಯದ ವರೆಗೆ ನೂತನ ಪ್ಯಾಸೆಂಜರ್ ರೈಲು ಆರಂಭಗೊಂಡಿದೆ.
ಎ. 12 ರಂದು ಮಂಗಳೂರಿನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸಂಸದ ಬ್ರಿಜೇಶ್ ಚೌಟ, ಸ್ಪೀಕರ್ ಯು.ಟಿ.ಖಾದರ್ , ಶಾಸಕ ವೇದವ್ಯಾಸ್ ಕಾಮತ್ , ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ರೈಲು ಸೇವೆ ಆರಂಭಕ್ಕೆ ಹಸಿರು ನಿಶಾನೆ ತೋರಿದರು. ಅಲ್ಲಿಂದ ಹೊರಟ ರೈಲು ರಾತ್ರಿ ಸುಬ್ರಹ್ಮಣ್ಯ ರೋಡ್ ತಲುಪಿದ ವೇಳೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ರೈಲಿಗೆ ಚಂಡೆ ವಾದ್ಯಗಳ ಘೋಷ, ಹೂವಿನ ಹಾರಗಳು ಮತ್ತು ನೂರಾರು ಜನರ ಜಯಘೋಷದೊಂದಿಗೆ ಸ್ವಾಗತ ನೀಡಲಾಯಿತು.
ರೈಲಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬೃಜೇಶ್ ಚೌಟ, ಸುಳ್ಯ ಶಾಸಕಿಯನ್ನು ಭಾಗೀರಥಿ ಮುರುಳ್ಯ, ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರೂ ಸಹ ಪ್ರಯಾಣದಲ್ಲಿ ಭಾಗಿಯಾಗಿದ್ದರು.
ಸ್ಥಳೀಯ ಮುಖಂಡರಾದ ರೈಲ್ವೇ ಬಳಕೆದಾರರ ವೇದಿಕೆಯ ಅಧ್ಯಕ್ಷ ಪ್ರಸಾದ್ ಕೆ.ಜಿ ನೆಟ್ಟಣ, ಎ ಬ್ಯಾಂಕ್ ಅಧ್ಯಕ್ಷ ಒಡಿಯಪ್ಪ ಸಿ., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಧುಸೂದನ್, ಕಿಶೋರ್ ಶಿರಾಡಿ ಮತ್ತಿತರರು ನಿಲ್ದಾಣದಲ್ಲಿ ರೈಲಿಗೆ ಭವ್ಯ ಸ್ವಾಗತ ಕೋರಿದರು.
ಈ ನೂತನ ರೈಲು ಸೇವೆಯಿಂದ ಸುಬ್ರಹ್ಮಣ್ಯ, ಸುಳ್ಯ ಹಾಗೂ ಕಡಬ ಭಾಗದ ನಿವಾಸಿಗಳಿಗೆ ಮಂಗಳೂರಿನೊಂದಿಗೆ ನೇರ ಸಂಪರ್ಕ ಸಿಗಲಿದ್ದು, ದೈನಂದಿನ ಸಂಚಾರ ಸುಲಭವಾಗಲಿದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ವ್ಯಾಪಾರಿಗಳಿಗೂ ಪ್ರಯೋಜನವಾಗಲಿದೆ.
ವೇಳಾಪಟ್ಟಿ
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು (56625) ಮುಂಜಾನೆ 4ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕಬಕ-ಪುತ್ತೂರಿಗೆ 5.18ಕ್ಕೆ ತಲುಪಲಿದೆ. ಇಲ್ಲಿ 2 ನಿಮಿಷ ನಿಲುಗಡೆಯಾಗಿ 6.30ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.ಸುಬ್ರಹ್ಮಣ್ಯ-ಮಂಗಳೂರು (56626) ಪ್ಯಾಸೆಂಜರ್ ರೈಲು ಬೆಳಗ್ಗೆ 7ಕ್ಕೆ ಸುಬ್ರಹ್ಮಣ್ಯದಿಂದ ಹೊರಟು 7.48ಕ್ಕೆ ಕಬಕ-ಪುತ್ತೂರು ತಲುಪಲಿದೆ. 2 ನಿಮಿಷ ನಿಲುಗಡೆಯಾಗಿ 9.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲು (56627) ಸಂಜೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸಂಜೆ 7.03ಕ್ಕೆ ಪುತ್ತೂರಿಗೆ ತಲುಪಲಿದೆ. 2 ನಿಮಿಷ ನಿಲುಗಡೆಯಾಗಿ ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಪ್ಯಾಸೆಂಜರ್ ರೈಲು (56628) ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೊರಟು ರಾತ್ರಿ 9.28ಕ್ಕೆ ಕಬಕ-ಪುತ್ತೂರಿಗೆ ತಲುಪಿ 2 ನಿಮಿಷ ನಿಲುಗಡೆಯಾಗಿ ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.