


ಸಹಕಾರಿ ಸಂಸ್ಥೆಯು ಲಾಭದ ಉದ್ದೇಶವನ್ನಿಟ್ಟುಕೊಳ್ಳದೇ ಮೂಲ ಉದ್ದೇಶವನ್ನು ಈಡೆರಿಸಿದಾಗ ಯಶಸ್ಸು ಸಾಧ್ಯ ಎಂದು ದ.ಕ. ಲೋಕಸಭಾ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಸುಳ್ಯದ ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ತರ ದಶಮಾನೋತ್ಸವ ಮತ್ತು ನೂತನ ಕಟ್ಟಡ ಸಿ. ಎ. ಬ್ಯಾಂಕ್ ಕಾಂಪ್ಲೆಕ್ಸ್ ‘ಲೋಕಾರ್ಪಣೆ ಸಮಾರಂಭದ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಹಕಾರಿ ಸಂಘವು ಮೂಲ ಉದ್ದೇಶಗಳ ಜತೆಗೆ ನಿರಂತರವಾಗಿ ಬೆಳೆದಿದ್ದರಿಂದ ಇಂತಹ ಸಾಧನೆಯನ್ನು ಮಾಡಿದೆ. ನಮ್ಮ ಜಿಲ್ಲೆಯ ಜನರಲ್ಲಿ ಸಹಕಾರಿ ಗುಣ ಬೆಳೆದು ಬಂದಿದ್ದರಿಂದ ಸಹಕಾರಿ ಕ್ಷೇತ್ರ ಇಷ್ಟು ಅಭಿವೃದ್ಧಿಯಾಗಿದೆ ಎಂದರು. ಸಹಕಾರಿ ಕ್ಷೇತ್ರವನ್ನು ಇನ್ನಷ್ಟೂ ಅಭಿವೃಧ್ದಿಗೊಳಿಸಲು ಹಾಗೂ ದೇಶದಾದ್ಯಂತ ವಿಸ್ತರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದರು. ಸಹಕಾರಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಯವಕರಿಗೆ ಸಹಕಾರಿ ನಾಯಕತ್ವದ ತರಬೇತಿ ನೀಡಲು ಉದ್ದೇಶಿಸಿದೆ. ದೇಶದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಸಹಕಾರಿ ಚಟುವಟಿಕೆಗಳನ್ನು ವಿಸ್ತರಿಸಲು ತೀರ್ಮಾನಿಸಿದೆ. ಸಹಕಾರ ಕ್ಷೇತ್ರದಿಂದ ಕೂಡ ರಾಷ್ಟ್ರ ನಿರ್ಮಾಣ ಕೂಡ ಮಾಡಬಹುದು ಎಂದು ಕೇಂದ್ರ ಸರಕಾರ ಕಂಡುಕೊಂಡಿದೆ. ಸಹಕಾರಿ ಕ್ಷೇತ್ರದಲ್ಲಿ ದ.ಕ.ಜಿಲ್ಲೆ ದೇಶಕ್ಕೆ ಮಾದರಿ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ದೇಶದ ಅಭಿವೃದ್ಧಿಗೆ ಸಹಕಾರಿ ಸಂಘ ಅವಶ್ಯಕತೆ ಇದೆ. ಕೃಷಿ ಸಾಲಗಳನ್ನು ಸಹಕಾರಿ ಸಂಘಗಳು ಮಾತ್ರ ನೀಡುತ್ತಿದೆ. ದ.ಕ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮ ಸೇವೆ ನೀಡುತ್ತಿರುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಹಾಗಾಗಿ ಇಲ್ಲಿ ರೈತರ ಆತ್ಮಹತ್ಯೆ ನಡೆದಿಲ್ಲ. ಈ ಸಹಕಾರಿ ಸಂಘ 30 ವರ್ಷಗಳ ಹಿಂದೆ ಕೂಡ ತಾಲೂಕಿಗೆ ಮಾದರಿಯಾಗಿತ್ತು. ಈಗ ಕೂಡ ಉತ್ತಮ ಅಭಿವೃದ್ಧಿ ಕಂಡು ಮಾದರಿಯಾಗಿ ಉಳಿದಿದೆ. ಸದಸ್ಯರಿಗೆ ಕೂಡ ಎಲ್ಲಾ ಸೌಲಭ್ಯವನ್ನು ನೀಡಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಂಘಟಿಸಿದ ಜಿಲ್ಲೆ ಇದ್ದರೇ ಅದು ದ.ಕ.ಜಿಲ್ಲೆ. ಈಗ ವಾಣಿಜ್ಯ ಬ್ಯಾಂಕ್ ಗಳಲ್ಲಿ ಉತ್ತಮ ಸೇವೆ ಸಿಗುತ್ತಿಲ್ಲ . ಬಾಷೆ ಬಾರದವರೂ ಸಂಸ್ಕೃತಿ ತಿಳಿಯದವರೂ ಇದ್ದಾರೆ. ಗ್ರಾಹಕರನ್ನು ಗೌರವದಿಂದ ಕಾಣುತ್ತಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಮಾತನಾಡಿ ಕೆಲ ವರ್ಷಗಳ ಹಿಂದೆ ಜಗತ್ತಿನಾದ್ಯಂತ ಅರ್ಥಿಕ ದಿವಾಳಿತನ ಉಂಟಾದರೂ ಭಾರತಕ್ಕೆ ಮಾತ್ರ ಸಮಸ್ಯೆಯಾಗಿಲ್ಲ. ಇದಕ್ಕೆಲ್ಲಾ ಕಾರಣ ಸಹಕಾರಿ ರಂಗವೇ ಕಾರಣ. ದೇಶದ 29% ಜನ ಸಹಕಾರಿ ರಂಗದಲ್ಲಿ ಇದ್ದಾರೆ. ಅಡಿಕೆ ಬೇಳೆ ಕುಸಿತವಾದಾಗ ಕ್ಯಾಂಪ್ಕೋ ಸಂಸ್ಥೆ ರೈತರ ನೆರವಿಗೆ ಬಂದಿದೆ. ರೈತರ ಸಮಸ್ಯೆಗಳಿಗೆ ಕೂಡ ಸರಕಾರಗಳು ಗ್ಯಾರಂಟಿ ಕೊಡಬೇಕು. ಪ್ರಕೃತಿ ವೈಪರಿತ್ಯದಿಂದಾಗುವ ಬೆಳೆ ಹಾನಿಗೆ ಸರಕಾರ ಸಹಾಯಕ್ಕೆ ಬರಬೇಕು. ಸಹಕಾರಿ ಕ್ಷೇತ್ರದಲ್ಲಿ ಕೂಡ ಡಿಜಟಲೀಕರಣದಿಂದಾಗಿ ಅವ್ಯವಹಾರ ನಡೆಯದೇ ಸದಸ್ಯರಿಗೆ ಭದ್ರತೆ ಸಿಗುವಂತಾಗಿದೆ. ಕೇಂದ್ರ ಸರಕಾರ ಕೂಡ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡಿ ಸಚಿವಾಲಯ ಕೂಡ ಆರಂಭಿಸಿದೆ ಎಂದರು.
ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ ನಮ್ಮ ಜಿಲ್ಲೆಯ ರೈತರ ಪ್ರಯೋಗಶೀಲತೆ ಬೆಳೆಸಿಕೊಂಡಿದ್ದಾರೆ. ಒಂದೇ ಕೃಷಿ ಮಾಡದೇ ವಿವಿಧ ಬೆಳೆ ಬೆಳೆಯತ್ತಾರೆ. ಪ್ರಯೋಗಶೀಲತೆ ಹಾಗೂ ಸಹಕಾರಿ ಸಂಘಗಳ ಸಹಕಾರದಿಂದ ದ.ಕ. ಜಿಲ್ಲೆಯಲ್ಲಿ ಯಾವುದೇ ರೈತರ ಆತ್ಮಹತ್ಯೆ ನಡೆದಿಲ್ಲ ಎಂದರು.



ಸಭೆಯ ಅಧ್ಯಕ್ಷತೆಯನ್ಬು ಸುಳ್ಯ.ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ವಿಕ್ರಂ ಎ.ವಿ. ವಹಿಸಿದ್ದರು. ಸಮಾರಂಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಮಾನ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನಿ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನಿರ್ದೇಶಕರಾದ ಎಸ್. ಎನ್ ಮನ್ಮಥ, ಕ್ಯಾಂಪ್ಕೋ ನಿರ್ದೇಶಕ ಎಸ್.ಬಿ. ಜಯರಾಮ ರೈ, ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್. ಎನ್, ನಗರ ಪಂಚಾಯತ್ ಸುಳ್ಯದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಎ. ನೀರಬಿದಿರೆ, ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್. ಎಂ. ರಘು,ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಕಿ ವಿಷ್ಣುನಗರ, ಹಾಗೂ ನಿರ್ದೆಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್.ಪಿ., ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು, ಸಿಇಓ ಹಾಗೂ ಸಹಕಾರಿಗಳು ಉಪಸ್ಥಿತರಿದ್ದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರಕುಮಾರ್, ಚಂದ್ರ ಕೋಲ್ಚಾರ್, ಸಂಘದ ಅಧ್ಯಕ್ಷ ವಿಕ್ರಂ ಎ.ವಿ., ಸಂಘದ ಮಾಜಿ ಅಧ್ಯಕ್ಷರುಗಳಾದ .ಮಹಮ್ಮದ್ ಕೆ.ವಿ., ಬಾಲಗೋಪಾಲ, ಹರೀಶ್ ಬೂಡುಪನ್ನೆ, ಸುಭೋದ್ ಶೆಟ್ಟಿ, ಸಂಘದ ನಿವೃತ್ತ ಸಿಬ್ಬಂದಿಗಳು, ಕಟ್ಟಡ ನಿರ್ಮಾಣದಲ್ಲಿ ದುಡಿದವರನ್ನು ಸನ್ಮಾನಿಸಲಾಯಿತು. ನವೋದಯ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು.
ಸಂಘದ ಅಧ್ಯಕ್ಷರಾದ ವಿಕ್ರಂ ಎ.ವಿ.ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ ವಂದಿಸಿದರು. ಸುಮಾ ಕೆ.ಎಸ್. ಪ್ರಾರ್ಥಿಸಿದರು.