
ಪುಟ್ಟ ಪುಟ್ಟ ಪುಟಾಣಿಗಳ ತೊದಲು ನುಡಿಗಳಲ್ಲಿ ವೇದಘೋಷಗಳು ಝೇಂಕರಿಸುವ ಮೂಲಕ ಸರಿಸುಮಾರು ಒಂದು ತಿಂಗಳ ಪರ್ಯಂತ ಇಲ್ಲಿನ ಪರಿಸರ ಪಾವನಗೊಳ್ಳುತ್ತದೆ. ಜೊತೆ ಜೊತೆಗೇ ಭಿನ್ನ ಭಿನ್ನ ಕಲಾಪ್ರಕಾರಗಳು ಅರಳಿ ಮೇಳೈಸಿ ಕಣ್ಸೆಳೆಯುತ್ತವೆ. ಯೋಗದ ಹಲವು ಆಸನಗಳನ್ನು ಅಳವಡಿಸಿಕೊಂಡ ಪುಟಾಣಿ ಯೋಗಪಟುಗಳು ದೇಹ ಮನಸ್ಸುಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವತ್ತ ಮನಮಾಡುತ್ತಾರೆ. ಹೌದು ಇಂತಹದ್ದೊoದು ಅಭೂತಪೂರ್ವ ದೃಶ್ಯಾವಳಿಗಳು ಕಂಡು ಬರುವುದು ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆವರಣದಲ್ಲಿ. ಸಹಸ್ರಾರು ವರ್ಷಗಳ ಹಿಂದಿನ ವೇದಮಂತ್ರಗಳು ಇಂದಿಗೂ ಜಗತ್ತಿನಾದ್ಯಂತ ಮಾರ್ದನಿಸುತ್ತಿವೆಯೆಂದರೆ ಅದಕ್ಕೆ ವೈದಿಕ ಪರಂಪರೆಯ ಸದ್ದಿಲ್ಲದ ಸೇವೆಯೇ ಕಾರಣ. ಅಲ್ಲಲ್ಲಿ ನಡೆಯುವ ವೇದ ತರಗತಿಗಳು, ವೇದ ಶಿಬಿರಗಳ ಮೂಲಕ ವೇದ ಪರಂಪರೆಯನ್ನು ಶಿಷ್ಯರಿಂದ ಶಿಷ್ಯರಿಗೆ ದಾಟಿಸುತ್ತಾ ವೇದಶಾಸ್ತ್ರಗಳ ಉಳಿವಿಗೆ ಹಲವಾರು ವೇದ ಪಾಠಶಾಲೆಗಳು ಶ್ರಮಿಸುತ್ತಿವೆ. ಅಂತಹ ವೇದ ಪಾಠಶಾಲೆಗಳ ಪೈಕಿ ಸುಳ್ಯದ ಹಳೆಗೇಟಿನ ವಿದ್ಯಾನಗರದಲ್ಲಿ ಕಾರ್ಯಾಚರಿಸುತ್ತಿರುವ ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, ಸುಳ್ಯ (ರಿ.)’ ಇದರ ಕೊಡುಗೆ ಅನನ್ಯವಾದುದು.
“ಶ್ರೀಕೇಶವ ಕೃಪಾ ಸಾಗಿಬಂದ ಹಾದಿ”:
ಅದೊಂದು ದಿನ ಸುಳ್ಯದ ಪುರೋಹಿತ ನಾಗರಾಜ್ ಭಟ್ಟರ ಜೊತೆ ಅವರ ಆತ್ಮೀಯರೊಬ್ಬರು ವೇದಾಧ್ಯಯನದ ಅಭಿಲಾಷೆಯನ್ನು ಮುಂದಿಟ್ಟರು. ಅವರ ವೇದ ಕಲಿಕೆಯ ಅತೀವ ಅಭಿರುಚಿಯನ್ನು ಮನಗಂಡು ಪ್ರೇರಿತರಾದ ಪುರೋಹಿತರು ವೇದ ತರಗತಿ ನಡೆಸುವುದಕ್ಕೆ ಮುಂದಡಿಯಿಟ್ಟರು. ಆದರೆ ತರಗತಿ ಅಂದ ಮೇಲೆ ಒಬ್ಬ ವಿದ್ಯಾರ್ಥಿ ಇದ್ದರೆ ಸಾಕೇ? ಅದಕ್ಕಾಗಿ ಸಮಾನ ಅಭಿರುಚಿ ಹೊಂದಿರುವ ನಾಲ್ಕಾರು ವಿದ್ಯಾರ್ಥಿಗಳನ್ನು ಸೇರಿಸಿ ವೇದ ತರಗತಿಯನ್ನು ಆರಂಭಿಸಿಯೇಬಿಟ್ಟರು. ಅಂದಿನ ದಿನಗಳಲ್ಲಿ ಇದು ಪತ್ರಿಕೆಯಲ್ಲಿ ವ್ಯಾಪಕವಾಗಿ ಪ್ರಚಾರ ಪಡೆದು ವೇದಾಧ್ಯಾಯಿಗಳಿಂದ ಮತ್ತಷ್ಟು ಬೇಡಿಕೆ ಬರತೊಡಗಿತು. ಒಂದು ಕಡೆ ವೇದ ಕಲಿಕೆಗೆ ಬೇಡಿಕೆಯೂ ಇತ್ತು, ಮತ್ತೊಂದೆಡೆ ವೇದಾಧ್ಯಾಯಿಗಳ ಜ್ಞಾನದಾಹವನ್ನು ತಣಿಸುವ ವೇದ ಪಾಠಶಾಲೆಗಳ ಕೊರತೆಯೂ ಇತ್ತು. ಹೀಗಾಗಿ ಪುರೋಹಿತರ ಮನದಲ್ಲೂ ವೇದ ಪಾಠಶಾಲೆ ಮುಂದುವರಿಸುವ ಆಸೆ ಮೆಲ್ಲನೆ ಚಿಗುರೊಡೆಯಿತು. ಮತ್ತೆ ಹೆಚ್ಚೇನೂ ಯೋಚಿಸದ ಅವರು ಪ್ರತೀ ವರ್ಷ ವೇದ ಶಿಬಿರಗಳನ್ನು ಆಯೋಜಿಸುತ್ತಾ ಬಂದರು. ಕ್ರಮೇಣ ಹಂತಹ0ತವಾಗಿ ಶಿಬಿರಾರ್ಥಿಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಹೀಗೆ ಆಕಸ್ಮಿಕ ಸಂದರ್ಭವೊ0ದರಲ್ಲಿ ಆಚಾನಕ್ಕಾಗಿ ಹುಟ್ಟಿಕೊಂಡ ವೇದ ಶಿಬಿರವು ಮುಂದೆ ವೇದದ ಜೊತೆಗೆ ಇನ್ನಿತರ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಜೋಡಿಸಿಕೊಂಡು ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ (ರಿ.)’ ಅನ್ನುವ ಅಧಿಕೃತ ಸಂಸ್ಥೆಯಾಗಿ ನೋಂದಣಿಗೊ0ಡು ಲೋಕಾರ್ಪಣೆಗೊಂಡು ಇಂದಿಗೆ 25 ವಸಂತಗಳನ್ನು ಪೂರ್ಣಗೊಳಿಸಿ ರಜತ ಮಹೋತ್ಸವದತ್ತ ಮುಂದುವರಿಯುತ್ತಿದೆ.
‘ವೇಗದ ಕಾರ್ಯವೈಖರಿಯಿಂದ ಮನಸೆಳೆವ ಪ್ರತಿಷ್ಠಾನ’
ಸರಿ ಸುಮಾರು 35 ದಿನಗಳ ರ‍್ಯಂತ ಆರಂಭದಲ್ಲಿ ವೇದ ತರಗತಿಯ ಉದ್ದೇಶವನ್ನಷ್ಟೇ ಹೊಂದಿದ್ದ ಪ್ರತಿಷ್ಠಾನ, ಆ ಬಳಿಕ ವಿವಿಧ ಚಟುವಟಿಕೆಗಳ ಮೂಲಕ ತನ್ನ ಪರಿಧಿಯನ್ನು ವಿಸ್ತರಿಸಿತು. ಮೊದಲಿಗೆ ಪ್ರಾಚೀನ ಭಾರತದ ಯೋಗ ಪದ್ಧತಿಯನ್ನು ಶಿಬಿರದಲ್ಲಿ ಅಳವಡಿಸಿಕೊಂಡು ಶಿಬಿರಾರ್ಥಿಗಳಿಗೆ ಯೋಗ ಪರಿಣಿತರಿಂದ ಯೋಗಾಭ್ಯಾಸವನ್ನು ಆರಂಭಿಸಿತು. ತದ ನಂತರ ಕಲಾಕ್ಷೇತ್ರದ ವಿವಿಧ ಪ್ರಕಾರಗಳನ್ನು ಶಿಬಿರದಲ್ಲಿ ಜೋಡಿಸಿಕೊಂಡು ಕರಾವಳಿಯ ಗಂಡುಕಲೆಯಾದ ಯಕ್ಷಗಾನ, ಕಂಸಾಳೆ – ವೀರಗಾಸೆಯಂತಹ ಜಾನಪದ ಕಲೆಗಳು, ಭಜನೆ – ಸಂಗೀತ ಮುಂತಾದ ಲಲಿತಕಲೆಗಳು, ಪೇಪರ್ ಕಟ್ಟಿಂಗ್ – ಮಿಮಿಕ್ರಿ ಮುಂತಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಇದರ ಜೊತೆಗೆ ಇತ್ತೀಚಿನ ಕೆಲ ವರ್ಷದಿಂದ ಶಿಬಿರಾರ್ಥಿಗಳಿಗೆ ಈಜು ತರಬೇತಿಯನ್ನು ಕೂಡಾ ಜೋಡಿಸಿಕೊಂಡಿರುವುದು ಪ್ರತಿಷ್ಠಾನದ ವೈವಿಧ್ಯತೆಗೆ ಸಾಕ್ಷಿಯಾಗಿದೆ.
ಇಲ್ಲಿ ನಡೆಯುವ ಶಿಬಿರಗಳಿಗೆ ಖಾಯಂ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಂಡಿಲ್ಲ. ಬದಲಾಗಿ ಪ್ರತೀ ವರ್ಷವೂ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಹೊಸ ಹೊಸ ಸಂಪನ್ಮೂಲ ವ್ಯಕ್ತಿಗಳಿಗೆ ವೇದಿಕೆಗಳನ್ನು ಒದಗಿಸಿಕೊಡುತ್ತಿರುವುದು ಪ್ರತಿಷ್ಠಾನದ ವಿಶೇಷತೆ. ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಹಿಂದೂ ಧರ್ಮದ ನಂಬಿಕೆಗಳು ಮತ್ತು ಆಚರಣೆಗಳ ಹೊಂದಿರುವ ವೈಜ್ಞಾನಿಕ ಕಾರಣಗಳು, ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣುಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಫುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ. ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ. ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬ0ಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಸುಮಾರು 35 ದಿನಗಳ ಕಾಲ ರಾಜ್ಯ ಹಾಗೂ ಹೊರರಾಜ್ಯದ ಆಯ್ಕೆಯಾದ 200 ಶಿಬಿರಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಇಪ್ಪತೈದನೆಯ ವರ್ಷದ ವೇದ-ಯೋಗ-ಕಲಾ ಶಿಬಿರವು ಸಂಪೂರ್ಣ ಉಚಿತವಾಗಿ ನಡೆಯಲಿದೆ.
ಉದ್ಘಾಟನಾ ಸಂಭ್ರಮ:
ದಿನಾಂಕ 20-೦4-2025ನೇ ಭಾನುವಾರ ಬೆಳಗ್ಗೆ 10.30ಕ್ಕೆ ವೇದ ವಿದ್ವಾಂಸರಾದ ವೇದ ಬ್ರಹ್ಮ ಶ್ರೀ ಕೇಶವ ಜೋಯಿಸ ವಳಲಂಬೆ ಇವರು ಉದ್ಘಾಟಿಸಲಿದ್ದು. ಪುತ್ತೂರಿನ ಪ್ರಸಿದ್ಧ ವಕೀಲರಾದ ಮಹೇಶ ಕಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದು, ಪ್ರಗತಿಪರ ಕೃಷಿಕ ಶ್ರೀಯುತ ರವಿಶಂಕರ ರಾವ್ ದೇವ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಶ್ರೀ ಕೇಶವಕೃಪ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭಾಶಂಸನೆಯನ್ನು ಮಾಡಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಪ್ರತಿಷ್ಠಾನದ ಸಂಚಾಲಕಿ ಶ್ರೀಮತಿ ಶ್ರೀದೇವಿ, ಸರಣಿ ಪೂಜಾ ಸಂಚಾಲಕ ಶ್ರೀ ಗೋಪಾಲಕೃಷ್ಣ ಭಟ್ ಶಿವನಿವಾಸ, ಸದಸ್ಯರಾದ ಶ್ರೀಮತಿ ಸುಜಾತ ರಾಧಾಕೃಷ್ಣ ಮಿತ್ತೂರು ಉಪಸ್ಥಿತರಿದ್ದರು.