

ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ “ಸಂಕಲ್ಪ” ತಂಡ ಹಾಗೂ ಡಾ.ಕಿಶನ್ ರಾವ್ ಬಾಳಿಲ ಇವರು ಜೊತೆಯಾಗಿ ಶಾಲೆಯ ಅಗತ್ಯ ಸಾಮಾಗ್ರಿಗಳನ್ನು ನೀಡಿದ್ದು ಇದರ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಚಿಕ್ಕಬಳ್ಳಾಪುರದ ಸಂಕಲ್ಪ ಬಳಗವು ಚಿಕ್ಕಬಳ್ಳಾಪುರದ ಹತ್ತಾರು ಗ್ರಾಮೀಣ ಶಾಲೆಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದೆ. ಈ ತಂಡದಲ್ಲಿ ವೈದ್ಯರುಗಳಾದ ಡಾ.ಭಾಸ್ಕರ ಬೆಂಗಳೂರು, ಡಾ.ಪ್ರಶಾಂತ ಕೇಸರಿ, ಶ್ರೀನಿವಾಸ ರಾವ್, ಎಸ್ ಆರ್ ವಿಜಯಾನಂದ , ಡಾ.ಕಿಶನ್ ರಾವ್ ಇದ್ದಾರೆ. ಇವರೆಲ್ಲಾ ಸೇರಿ ಅಗತ್ಯವಿರುವ ಗ್ರಾಮೀಣ ಜನರಿಗೆ, ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಅಂದರೆ ಗ್ರಾಮೀಣ ಭಾಗದ ಶಿಕ್ಷಣ ಹಾಗೂ ಆರೋಗ್ಯ ಸೇವೆ ಉತ್ತಮಗೊಳ್ಳಬೇಕು ಎನ್ನುವುದು ಇವರ ಕಾಳಜಿ. ಈಗ ಬಾಳಿಲ ಹಿರಿಯ ಪ್ರಾಥಮಿಕ ಶಾಲೆಗೆ, ನಲಿಕಲಿ ಪೀಠೋಪಕರಣ, ಬೆಂಚು-ಡೆಸ್ಕ್, ವಿಜ್ಞಾನ ಪ್ರಯೋಗಾಲಯಕ್ಕೆ ಬೋಧನಾ ಸಲಕರಣೆ, ಆಟೋಟ ಸಾಮಾಗ್ರಿ ಹೀಗೆ ಸುಮಾರು 1.5 ಲಕ್ಷ ರೂಪಾಯಿ ವಸ್ತುಗಳನ್ನು ನೀಡಿದ್ದಾರೆ.

ಈ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು. ಸಭಾಧ್ಯಕ್ಷತೆಯನ್ನು ಬಾಳಿಲ ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರಾಧಾಕೃಷ್ಣ ರಾವ್ ವಹಿಸಿದ್ದರು. ಕೊಡುಗೆಗಳನ್ನು ಡಾ.ಕಿಶನ್ ರಾವ್ ಬಾಳಿಲ ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕ ಪಿಜಿಎಸ್‌ಎನ್ ಪ್ರಸಾದ್, ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿ ಆಶಾ ನಾಯಕ್, ಶಿಕ್ಷಣ ಸಂಯೋಜಕಿ ಸಂಧ್ಯಕುಮಾರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ ಕೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರುಕ್ಮಯ್ಯ ನಾಯ್ಕ್ ಹಾಗೂ ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿಯ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕ ವೃಂದದವರು, ಹಿರಿಯ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕರಾದ ಪಿ ಜಿ ಎಸ್ ಎನ್ ಪ್ರಸಾದ್ ಪ್ರಾಸವಿಕವಾಗಿ ಮಾತನಾಡಿದರು. ಮುಖ್ಯಗುರುಗಳಾದ ಉದಯಕುಮಾರ್ ರೈ ಸ್ವಾಗತಿಸಿ, ಶಿಕ್ಷಕ ಶಿವಪ್ರಸಾದ್ ವಂದಿಸಿದರು. ಈ ಕಾರ್ಯಕ್ರಮವನ್ನು ಶಿಕ್ಷಕಿ ಶುಭ ಡಿ ನಿರೂಪಿಸಿದರು.