ಮಾನವೀಯತೆಯನ್ನು ಸಾರಿದ ಸಮಾಜಮುಖಿ ಕಾರ್ಯದ ವರದಿ:
ಸಮಾಜದಲ್ಲಿ ಕಷ್ಟದಲ್ಲಿರುವವರ ಕೈ ಹಿಡಿಯಬೇಕು, ಅಶಕ್ತರಿಗೆ ಆಸರೆಯಾಗಬೇಕು ಎನ್ನುವುದು ನಾವು ಹುಟ್ಟಿನಿಂದಲೇ ಕಲಿತುಕೊಂಡು ಬಂದಂತಹ ಪಾಠ. ಆದರೆ ಇಂದಿನ ಈ ಯಾಂತ್ರೀಕೃತ ಬದುಕಿನಲ್ಲಿ ಮಾನವೀಯತೆ ಕಣ್ಮರೆಯಾಗುತ್ತಿದೆ ಎಂದು ನಾವು ಅದೆಷ್ಟೋ ಬಾರಿ ಅಂದುಕೊಳ್ಳುತ್ತೇವೆ. ಆದರೆ ಕೆಲವೊಂದು ನಿಸ್ವಾರ್ಥ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ಮಾನವೀಯತೆಯ ಪಾಠವನ್ನು ಕಲಿಸುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಮಾನವೀಯತೆಯನ್ನು ಸಾರಿದ ಅಂತಹ ಒಂದು ಸಮಾಜಮುಖಿ ಕಾರ್ಯದ ಬಗ್ಗೆ ವಿಶೇಷ ವರದಿ ಇಲ್ಲಿದೆ.
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಮಿತ್ತಮಜಲು ನಿವಾಸಿಗಳಾದ ಶಿವರಾಮ ಆಚಾರ್ಯ ಹಾಗೂ ಅವರ ಸಹೋದರಿ ರತ್ನಾವತಿ ಅವರು ಆರೋಗ್ಯವಾಗಿದ್ದರೂ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ವಾಸಿಸಲು ಸಾಧ್ಯವಾಗದಂತಹ ಮನೆಯಲ್ಲಿ ಇವರು ವಾಸಿಸುತ್ತಿದ್ದರು. ಇವರ ಮನೆಯ ಪರಿಸ್ಥಿತಿಯನ್ನು ಕಂಡು ಮರುಗಿದ ಹರಿಹರ ಪಲ್ಲತ್ತಡ್ಕದ “ಸಚಿನ್ ಕ್ರೀಡಾ ಸಂಘ”ವು ಅಧ್ಯಕ್ಷರಾದ ಪ್ರದೀಪ್ ಕಜ್ಜೋಡಿ ಅವರ ಮುಂದಾಳತ್ವದಲ್ಲಿ ಇವರಿಗೆ ಮನೆ ನಿರ್ಮಿಸಿ ಕೊಡುವ ಪಣತೊಟ್ಟು ಮುನ್ನಡೆಯಿತು. ಮನೆ ನಿರ್ಮಾಣಕ್ಕೆ ಬೇಕಾದಂತಹ ಮರಳು, ಮುರ ಕಲ್ಲು, ಸಿಮೆಂಟ್, ದಾರಂದ, ಟೈಲ್ಸ್ ಸೇರಿದಂತೆ ಮುಂತಾದ ಸಾಮಾಗ್ರಿಗಳನ್ನು ದಾನಿಗಳಿಂದ ಪಡೆದು ಸಚಿನ್ ಕ್ರೀಡಾ ಸಂಘದ ಸದಸ್ಯರೇ ಹಗಲು-ರಾತ್ರಿ ಶ್ರಮಸೇವೆಯ ಮೂಲಕ ಪಾಯ, ತಳ, ಗೋಡೆ, ತಾರಸಿ ಎಲ್ಲವನ್ನೂ ನಿರ್ಮಿಸಿದ್ದಾರೆ.
ಹಲವು ಜನರು ನೀಡಿದ ಹಣದಿಂದ, ದಾನಿಗಳು ನೀಡಿದ ಸಾಮಾಗ್ರಿಗಳಿಂದ ಹಾಗೂ “ಸಚಿನ್ ಕ್ರೀಡಾ ಸಂಘ”ದ ಸದಸ್ಯರ ಶ್ರಮದಿಂದ ಇದೀಗ ಆ ಸಹೋದರ-ಸಹೋದರಿಗೆ ಸುಸಜ್ಜಿತ ಸೂರು ನಿರ್ಮಾಣಗೊಂಡಿದ್ದು, ಮೇ.01 ರಂದು ಈ ಮನೆಯ ಹಸ್ತಾಂತರ ನಡೆಯಲಿದೆ.
ಕಷ್ಟದಲ್ಲಿರುವವರಿಗೆ ಆಸರೆಯಾಗುವ ಮನಸ್ಸು ಹಾಗೂ ಮಾನವೀಯತೆಯ ಗುಣದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವ ಮಾತಿಗೆ ಸ್ಪಷ್ಟ ಉದಾಹರಣೆಯಾಗಿರುವ “ಸಚಿನ್ ಕ್ರೀಡಾ ಸಂಘ”ದ ಈ ಶ್ಲಾಘನೀಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಾ ಈ ತಂಡದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನೆರವೇರಲಿ ಎಂದು ಆಶಿಸುತ್ತಿದ್ದೇವೆ.
✍️ಉಲ್ಲಾಸ್ ಕಜ್ಜೋಡಿ
- Thursday
- November 21st, 2024