
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿರುವುದು ಶ್ಲಾಘನೀಯ. 5 ದಶಕಗಳಿಗೂ ಅಧಿಕ ಸಮಯದಿಂದ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶ್ರೀ ದೇವಳದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡುವುದು ಭಾಗ್ಯ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕೃಪಾಶೀರ್ವಾದವೇ ವಿದ್ಯಾಸಂಪತ್ತಿನ ಔನತ್ಯಕ್ಕೆ ಅಡಿಗಲ್ಲು.ದೇವರ ಸಂಸ್ಥೆಯಲ್ಲಿ ಶ್ರೀದೇವರ ಪ್ರಸಾದ ರೂಪಿಯಾಗಿ ಪಡೆದ ವಿದ್ಯೆಯಿಂದ ಭವಿಷ್ಯ ಪಾವನವಾಗುವುದರಲ್ಲಿ ಸಂಶಯವಿಲ್ಲ.ಗ್ರಾಮೀಣ ಭಾಗದ ವಿದ್ಯಾರ್ಥಿನಿಯು ಯಾವುದೇ ಹೆಚ್ಚುವರಿ ಕೋಚಿಂಗ್ ಇತ್ಯಾದಿ ಪಡೆಯದೆ ತರಗತಿಯ ಪಾಠ ಪ್ರವಚನವನ್ನು ಆಲಿಸಿ ಅಧಿಕ ಅಂಕ ಪಡೆದಿರುವುದು ವಿದ್ಯಾಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ರಾಜ್ಯಕ್ಕೆ 5ನೇ ಸ್ಥಾನ ಪಡೆದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿನಿ ದುರ್ಗಾಲಕ್ಷ್ಮೀ ಜಿ.ಸಿ ಅವರನ್ನು ಸನ್ಮಾನಿಸಿ ಸೋಮವಾರ ಅವರು ಮಾತನಾಡಿದರು.ಆಧುನಿಕ ಯುಗದಲ್ಲಿ ವಿದ್ಯೆ ಅತ್ಯಂತ ಆವಶ್ಯಕ.ಹೆಚ್ಚಿನ ಅಂಕಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ತೆರಳಲು ಬುನಾದಿಯಾಗುತ್ತದೆ.ಆದುದರಿಂದ ಕಠಿಣ ಪರಿಶ್ರಮದ ಅಧ್ಯಾಯನ ಅತ್ಯಗತ್ಯ.ನಿಷ್ಠೆ ಮತ್ತು ಶಿಸ್ತಿನ ಮೂಲಕ ಪಾಠ ಪ್ರವಚನದ ಕಡೆಗೆ ಮನಸು ನೀಡಿದರೆ ಉತ್ತಮ ಸಾಧನೆ ಮೆರೆಯಲು ಸಾಧ್ಯ ಎಂದರು.
ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ಪ್ರಾಚಾರ್ಯರು 600ರಲ್ಲಿ 953 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದ ವಿದ್ಯಾಲಕ್ಷ್ಮೀ ಜಿ.ಸಿ ಅವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ದುರ್ಗಾಲಕ್ಷ್ಮೀ ಅವರ ತಾಯಿ ಸುಶೀಲ.ಜಿ, ಸಹೋದರ ಕಾಲೇಜಿನ ಹಿರಿಯ ವಿದ್ಯಾರ್ಥಿ ಶಿವಪ್ರಸಾದ್ ಜಿ.ಸಿ, ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್.ಬಿ.ಎನ್, ಕಾರ್ಯದರ್ಶಿ ರತ್ನಾಕರ.ಎಸ್, ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಜ್ಯೋತಿ.ಪಿ.ರೈ, ಭವ್ಯಶ್ರೀ ಹರೀಶ್ ಕುಲ್ಕುಂದ, ಸುಧಾ, ಸವಿತಾ ಕೈಲಾಸ್, ಶ್ರೀಧರ್ ಪುತ್ರನ್, ಮನೋಜ್ ಕುಮಾರ್ ಬಿ.ಎಸ್, ಸಿಬ್ಬಂದಿಗಳಾದ ಸುನೀತಾ ಕುಲ್ಕುಂದ, ಕೇಶವ ಆರ್ಯ ಪೆರುವಾಜೆ ಉಪಸ್ಥಿತರಿದ್ದರು.