ಗರ್ಭಾವಸ್ಥೆ ಜಗತ್ತಿನ ಎಲ್ಲಾ ಮಹಿಳೆಯರು ಬಯಸುವಂತಾ ಒಂದು ಭಾಗ್ಯ ಮತ್ತು ದೇವರು ಮನುಸಂಕುಲಕ್ಕೆ ನೀಡಿದ ಒಂದು ವರದಾನ. ಸಾಮಾನ್ಯವಾಗಿ ಗರ್ಭಧರಿಸಿದ ಬಳಿಕ ಗರ್ಭಿಣಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಾರ್ಮೋನು ವ್ಯತ್ಯಾಸ ಹಾಗೂ ವೈಪರೀತ್ಯ. ಹೆಚ್ಚಿನ ಮಹಿಳೆಯರು ಗರ್ಭಿಣಿಯರಾದಾಗ ರಸದೂತ ಏರಿಳಿತದ ಸ್ರವಿಕೆಯ ಕಾರಣದಿಂದಲೇ ರಕ್ತದೊತ್ತಡ, ಕಾಲಿನ ವಾತ, ಕಾಲಿನಲ್ಲಿ ನೀರು ತುಂಬಿಕೊಳ್ಳುವುದು, ವಾಂತಿಯಾಗುವಿಕೆ, ಮಧುಮೇಹ ಹೀಗೆ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಗರ್ಭಿಣಿಯರು ತಮ್ಮ ದೇಹದ ಇತರ ಅಂಗಾಂಗಳ ಆರೋಗ್ಯಕ್ಕೆ ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೇ ಕಾಳಜಿ ಹಲ್ಲು ಮತ್ತು ವಸಡಿನ ಆರೋಗ್ಯಕ್ಕೂ ಕಾಳಜಿ ವಹಿಸಬೇಕು ಯಾಕೆಂದರೆ ಪ್ರತಿಶತ 80ರಷ್ಟು ಗರ್ಭಣಿಯರು ವಸಡಿನೂತ ಎಂಬ ಕಾಯಿಲೆಯಿಂದ ಬಳಲುತ್ತಾರೆ. ಗರ್ಭಿಣಿಯರು ಹೀಗೆ ಸ್ವಚ್ಛ ಶುಭ್ರದೇಹವು ಇರಬೇಕೆಂದು ಬಯಸುತ್ತಾರೋ ಹಾಗೆಯೇ ಸ್ವಚ್ಛ, ಶುಭ್ರವಾದ ಬಾಯಿಯನ್ನು ಉಳಿಸಿಕೊಂಡಲ್ಲಿ ವಸಡಿನೂತದ ಪ್ರಮಾಣವನ್ನು ಕಡಿಮೆಯಾಗಿಸಬಹುದು.
ಹೆಚ್ಚಾಗಿ ಸ್ರವಿಸುವ ಹಾರ್ಮೋನುಗಳೇ ವಸಡಿನೂತಕ್ಕೆ ಮುಖ್ಯ ಕಾರಣ. ಇವುಗಳು ದೇಹದ ಎಲ್ಲಾ ಅಂಗಾಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ಬಾಯಿಯಲ್ಲಿನ ವಸಡಿನ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಬಾಯಿ ಶುಭ್ರವಾಗಿಲ್ಲದ್ದಲ್ಲಿ ಹಲ್ಲು ಕಾಣಿಸಿಕೊಳ್ಳದಷ್ಟು ವಸಡಿನೂತ ಉಂಟಾಗಿ, ದುರ್ಮಾಂಸ ಬೆಳೆಯುವೂದೂ ಊಂಟು. ಇದರ ಜೊತೆಗೆ ವಿಪರೀತ ವಸಡಿನಲ್ಲಿ ರಕ್ತಸ್ರಾವವಾಗುತ್ತದೆ. ಹಲ್ಲುಜ್ಜಲು ಬಿಡಿ, ಜೋರಾಗಿ ಉಸಿರಾಡಲೂ ಗರ್ಭಿಣಿಯರು ಬೆದರುತ್ತಾರೆ. ರಕ್ತಸ್ರಾವದ ಜೊತೆಗೆ ವಸಡಿನಲ್ಲಿ ಸೂಕ್ಷ್ಮವಾದ ಬ್ಯಾಕ್ಟಿರಿಯಾಗಳು ಸೇರಿಕೊಂಡು ಕೆಲವೊಮ್ಮೆ ಅಸಾಧ್ಯ ನೋವು ಬರುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ಗರ್ಭಧರಿಸಿ ಮೂರು ತಿಂಗಳಿಂದ ಆರಂಭವಾಗಿ ಒಂಭತ್ತು ತಿಂಗಳಿನವರೆಗೂ ಈ ರೀತಿ ರಕ್ತಸ್ರಾವ ಮತ್ತು ವಸಡಿನೂತ ಇರಬಹುದು. ಆದರೆ ಈ ಗರ್ಭಿಣಿಯರ ವಸಡಿನೂತ ಮಗುವಿನ ಜನನದ ಬಳಿಕ ತನ್ನಂತಾನೇ ಕಡಿಮೆಯಾಗುತ್ತದೆ ಮತ್ತು ಕಡಿಮೆಯಾಗದಿದ್ದಲ್ಲಿ ದಂತ ವೈದ್ಯರ ಸಲಹೆ ಅಗತ್ಯ. ಸಾಮಾನ್ಯವಾಗಿ ಹಲ್ಲಿನ ಸುತ್ತ ಪಾಚಿಕಟ್ಟಿದಲ್ಲಿ, ಜಾಸ್ತಿ ದಂತಕಿಟ್ಟ ಇದ್ದಲ್ಲಿ ಬ್ಯಾಕ್ಟೀರಿಯಾಗಳು ಇದರಲ್ಲಿ ವೃದ್ಧಿಸಿ ವಸಡಿನೂತ, ರಕ್ತಸ್ರಾವ ನೋವು ಮುಂತಾದವುಗಳಿಗೆ ಕಾರಣವಾಗಬಹುದು. ಆದ ಕಾರಣ ಗರ್ಭ ಧರಿಸುವ ಮೊದಲೇ ದಂತ ವೈದ್ಯರನ್ನು ಕಂಡು ಹಾಳಾದ ಹಲ್ಲುಗಳನ್ನು ಸರಿಪಡಿಸಿಕೊಂಡು, ದಂತ ಶುಚಿತ್ವ ಮಾಡಿಸಿಕೊಂಡು, ಮುಂದೆ ಬರಬಹುದಾದ ವಸಡಿನೂತ ಮತ್ತು ದಂತ ಸಂಬಂಧಿ ಕಾಯಿಲೆಗಳ ಪ್ರಮಾಣವನ್ನು ಕುಗ್ಗಿಸಬಹುದು. ಅದೇ ರೀತಿ ಗರ್ಭ ಧರಿಸಿದ ಮಹಿಳೆಯರು ಎರಡು ತಿಂಗಳಿಗೊಮ್ಮೆಯಾದರೂ ದಂತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ ವಿಚಿತ್ರವೆಂದರೆ ಪತ್ರಿಕೆಯು ಸಮೀಕ್ಷೆಯೊಂದರ ಪ್ರಕಾರ ಗರ್ಭಧರಿಸುವ ಪ್ರತಿಶತ 50 ರಷ್ಟು ಮಹಿಳೆಯರು ತಮ್ಮ ಜೀವಮಾನದಲ್ಲಿ ಒಮ್ಮೆ ಕೂಡ ದಂತವೈದ್ಯರಲ್ಲಿ ತೋರಿಸುವುದಿಲ್ಲ.
ವಸಡಿನೂತಕ್ಕೆ ಕಾರಣಗಳೇನು?
- ಹಾರ್ಮೋನ್ (ರಸದೂತ)ಗಳ ಏರಿಳಿತದ ಸ್ರವಿಕೆ ಅಥವಾ ವೈಪರೀತ್ಯ.
- ಕೊಳೆ, ಪಾಚಿ, ದಂತಕಿಟ್ಟ ಮುಂತಾದ ಹಲ್ಲಿನ ಸುತ್ತ ತುಂಬಿರುವ ವಸ್ತುಗಳಿಂದ ಬ್ಯಾಕ್ಟಿರಿಯಾ ವೃದ್ಧಿಸಿಕೊಂಡು ವಸಡಿನೂತಕ್ಕೆ ಪೂರಕವಾದ ವಾತಾವರಣ ಉಂಟಾಗಬಹುದು.
- ರಕ್ತಸ್ರಾವಕ್ಕೆ, ನೋವಿಗೆ ಹೆದರಿ ಹಲ್ಲುಜ್ಜುವುದನ್ನು ಸರಿಯಾಗಿ ಮಾಡದೇ ಇದ್ದಲ್ಲಿ ವಸಡಿನೂತ ಉಂಟಾಗಬಹುದು.
- ಗರ್ಭಿಣಿಯರಲ್ಲಿ ಹೆಚ್ಚಾಗಿ ದಿನಬಳಕೆಯ ವಸ್ತುಗಳ ಬಗ್ಗೆ ವಾಕರಿಕೆ ಉಂಟಾಗಬಹುದು. ಕೆಲವೊಮ್ಮೆ ದಂತಚೂರ್ಣದ ವಾಸನೆ ಕೂಡ ವಾಕರಿಕೆ ನಾಂದಿಯಾಗಬಹುದು. ಈ ಕಾರಣದಿಂದ ದಂತಚೂರ್ಣ ಬಳಸದೆ ಸರಿಯಾಗಿ ಹಲ್ಲುಜ್ಜದೆ ಇರುವುದರಿಂದ ವಸಡಿನೂತ ಉಂಟಾಗಬಹುದು.
ವಸಡಿನೂತದ ಪರಿಣಾಮಗಳು:-
- ಅತಿಯಾದ ವಸಡಿನೂತದಿಂದ ನೋವು, ಕೀವು ಮತ್ತು ಕೆಲವೊಮ್ಮೆ ತಂತಾನೆ ವಸಡಿನಿಂದ ರಕ್ತಸ್ರಾವವಾಗಬಹುದು.
- ವಸಡು ಊದಿಕೊಂಡು ಕೆಂಪಾಗಿ, ಮೃದುವಾದಾಗ, ಹಲ್ಲು ಸಡಿಲವಾಗಬಹುದು ಮತ್ತು ಗಟ್ಟಿಯಾದ ಪದಾರ್ಥಗಳನ್ನು ಕಡಿಯುವಾಗ ನೋವಾಗಬಹುದು ಮತ್ತು ರಕ್ತಸ್ರಾವವಾಗಬಹುದು. ಹಲ್ಲು ತನ್ನ ಬಿಗಿತನವನ್ನು ಕಳೆದುಕೊಳ್ಳಬಹುದು.
- ತಾವು ಸೇವಿಸಿದ ಆಹಾರ ವಸಡಿನ ನಡುವೆ ಸಿಕ್ಕಿ ಹಾಕಿಕೊಂಡು, ತುರಿಕೆ, ಕೆರೆತ ಮತ್ತು ಕಿರಿಕಿರಿ
ಉಂಟಾಗಬಹುದು. - ಬಾಯಿಯಲ್ಲಿ ಕೆಟ್ಟವಾಸನೆ, ಬಾಯಿ ಉರಿ ಮತ್ತು ಕೆಲವೊಮ್ಮೆ ಬಾಯಿ ಒಣಗಲೂಬಹುದು. ಬಾಯಿಯಲ್ಲಿ ಜೊಲ್ಲುರಸದ ಸ್ರವಿಕೆ ಪ್ರಮಾಣ ಕಡಿಮೆಯಾಗಿ ದಂತಕ್ಷಯ ಮತ್ತು ಇತರ ದಂತ ಸಂಬಂಧಿ ಕಾಯಿಲೆಗಳು ಹುಟ್ಟಿಕೊಳ್ಳಬಹುದು.
- ಪ್ರತಿ ಬಾರಿ ಆಹಾರ ಸೇವಿಸಿದಾಗ ಜಗಿದಾಗ ಗಟ್ಟಿ ಪದಾರ್ಥಗಳನ್ನು ತಿಂದಾಗ ವಸಡಿನಲ್ಲಿ ರಕ್ತ ಒಸರಿಕೊಂಡು ನಾವು ತಿನ್ನುವ ಆಹಾರದ ಬಗ್ಗೆ ವಾಕರಿಕೆ ಉಂಟಾಗಬಹುದು. ಅದಲ್ಲದೆ ನೋವು ಮತ್ತು ಅಸಹ್ಯಕರ ಭಾವನೆ ಉಂಟಾಗಬಹುದು.
ವಸಡಿನೂತ ತಡೆಗಟ್ಟುವುದು ಹೇಗೆ?
- ಸಾಮಾನ್ಯವಾಗಿ ಮಹಿಳೆಯರು ಗರ್ಭಧರಿಸಿದ ಬಳಿಕ ಮೊದಲನೇ ತ್ರೈಮಾಸಿಕ (Trimister) ಮತ್ತು ಮೂರನೇ ತ್ರೈಮಾಸಿಕದಲ್ಲಿ (Trimister) ಯಾವುದೇ ರೀತಿಯ ದಂತ ಚಿಕಿತ್ಸೆಯನ್ನು ಮಾಡುವುದಿಲ್ಲ. ಕೇವಲ emeಡಿgeಟಿಛಿಥಿ ಅಥವಾ ತಾತ್ಕಾಲಿಕ ತುರ್ತು ದಂತ ಚಿಕಿತ್ಸೆಯನ್ನು ಮಾತ್ರ ಮಾಡಲಾಗುತ್ತದೆ. ಅತೀ ಅಗತ್ಯ ಚಿಕಿತ್ಸೆಗಳನ್ನು ಮಾತ್ರ ಈ ಒಂದು ಮತ್ತು ಮೂರನೇ ತ್ರೈಮಾಸಿಕದಲ್ಲಿ ಮಾಡಲಾಗುತ್ತದೆ. ಒಂದನೇ ತ್ರೈಮಾಸಿಕ ಗರ್ಭದಲ್ಲಿರುವ ಮಗುವಿನ ಸರ್ವಾಂಗೀಣ ದೈಹಿಕ ಬೆಳವಣಿಗೆಗೆ ಬಹಳ ಸಂಧಿಕಾಲ. ಈ ಸಮಯದಲ್ಲಿ ಗರ್ಭಿಣಿಯರು ಯಾವುದೇ ರೀತಿಯ ಹೊರಗಿನ ಔಷಧಿಗಳನ್ನು ವೈದ್ಯರ ಅನುಮತಿಯಿಲ್ಲದೆ ಸೇವಿಸುವಂತಿಲ್ಲ. ಅನಗತ್ಯ ಔಷಧಿ ಸೇವಿಸಿದ್ದಲ್ಲಿ ಮಗುವಿನ ದೈಹಿಕ ಬೆಳವಣಿಗೆ ಕುಂಠಿತವಾಗಬಹುದು. ಅದೇ ರೀತಿ ಮೂರನೇ ತ್ರೈಮಾಸಿಕದಲ್ಲೂ ಯಾವುದೇ ರೀತಿಯ ಚಿಕಿತ್ಸೆ ಹಾಗೂ ಔಷಧಿಗಳನ್ನು ಕಡಿಮೆ ಮಾಡಿದಲ್ಲಿ ಉತ್ತಮ. ಕೇವಲ ಅತೀ ಅವಶ್ಯಕ ತುರ್ತು ಚಿಕಿತ್ಸೆಗಳನ್ನು ಮಾತ್ರ ವೈದ್ಯರ ಅನುಮತಿ ಪಡೆದ ಬಳಿಕವೇ ಮಾಡಬೇಕು. ಸಾಮಾನ್ಯವಾಗಿ ದಂತಕುಳಿ ತುಂಬಿಸಿಕೊಳ್ಳುವುದು, ಹಲ್ಲು ಕೀಳಿಸಿಕೊಳ್ಳುವುದು ಮತ್ತು ದಂತ ಸ್ವಚ್ಛತೆ ಮಾಡಿಸಿಕೊಳ್ಳುವುದು ಮುಂತಾದ ಚಿಕಿತ್ಸೆಗಳನ್ನು ಎರಡನೇ ತ್ರೈಮಾಸಿಕದಲ್ಲಿ ಅಂದರೆ, 4, 5 ಮತ್ತು 6ನೇ ತಿಂಗಳಿನಲ್ಲಿ ಮಾಡಿಸುವುದು ಉತ್ತಮ. ಆದಕಾರಣ ಗರ್ಭಧರಿಸುವ ಮುಂಚೆ ದಂತ ವೈದ್ಯರಲ್ಲಿ ದಂತ ತಪಾಸಣೆ ಮಾಡಿಸಿಕೊಂಡು ರೋಗಗ್ರಸ್ತ ಹಲ್ಲುಗಳನ್ನು ಕೀಳಿಸಿಕೊಂಡು, ಹುಳುಕು ಹಲ್ಲುಗಳನ್ನು ತುಂಬಿಸಿಕೊಂಡು, ಸರಿಪಡಿಸಬಹುದಾದ ಹಲ್ಲುಗಳನ್ನು ಸರಿಪಡಿಸಿಕೊಂಡು, ದಂತ ಶುಚಿತ್ವ ಮಾಡಿಸಿಕೊಂಡರೆ, ಮುಂದೆ ಗರ್ಭಧರಿಸಿದ ಮೇಲೆ ಬರಬಹುದಾದ ದಂತ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
- ವಸಡಿನೂತಕ್ಕೆ ಕಾರಣವಾಗುವಂತಹ ಯಾವುದೇ ಗುಳಿಗೆಗಳನ್ನು ಸೇವಿಸಬಾರದು.
- ದಿನಕ್ಕೆರಡು ಬಾರಿ ಮೆದುವಾದ ದಂತಕುಂಚದಿಂದ ಹಲ್ಲುಜ್ಜಬೇಕು. ಶುಚಿತ್ವ ಮತ್ತು ದೇಹದ ಇತರ ಅಂಗಗಳಿಗೆ ಕೊಡುವಷ್ಟೆ ಪ್ರಮುಖ್ಯತೆ ಹಲ್ಲುಗಳಿಗೂ ನೀಡಬೇಕು.
- ದಂತ ವೈದ್ಯರ ಸಲಹೆಯ ಮೇರೆಗೆ ಮಾರುಕಟ್ಟೆಯಲ್ಲಿ ಸಿಗುವ ಬಾಯಿ ಮುಕ್ಕಳಿಸುವ ಔಷಧಿಗಳನ್ನು ಉಪಯೋಗಿಸಿದಲ್ಲಿ ವಸಡಿನೂತದ ಪ್ರಮಾಣವನ್ನು
ಕುಗ್ಗಿಸಬಹುದು.
ಉದಾಹರಣೆ: Hexidale, Hexidine, Rexidine ಇತ್ಯಾದಿ
ಕೊನೆ ಮಾತು.
ಮಹಿಳೆಯರು ಗರ್ಭಿಣಿಯಾದಾಗ ಹಲ್ಲುಗಳ ಬಗ್ಗೆ ಅಪರಿಮಿತ ಕಾಳಜಿ ವಹಿಸಬೇಕು. ನಿರಂತರ ದಂತ ವೈದ್ಯರನ್ನು ಕಾಣಬೇಕು ಮತ್ತು ಅವರ ಸಲಹೆಯಂತೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು.
ಡಾ ಮುರಲಿ ಮೋಹನ್ ಚೂಂತಾರು
BDS MDS DNB MBA MOSRCSEd
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು.
drmuraleechoontharu@gmail.com
9845135787
www.surakshadental.com