ಸುಳ್ಯ: ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮಗಳು ಮೊದಲ್ಗೊಂಡಿದ್ದು ಶನಿವಾರ ಸಂಜೆ ದೀಪಾರಾಧನೆಯ ಬಳಿಕ ಕುತ್ತಿ ಪೂಜೆ ಕಾರ್ಯಕ್ರಮ ನಡೆಯಿತು.
ಕಾಷ್ಠ ಶಿಲ್ಪಿ ಶಶಿಧರನ್ ಚಾಲಂಗಾಲ್, ಮೇಸ್ತ್ರಿ ನಾರಾಯಣನ್ ಪುದಿಯ ಪರಂಬತ್ ಅವರುಗಳು ಕುತ್ತಿಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.
ಎ.15: ದೈವಸ್ಥಾನದ ಪ್ರತಿಷ್ಠೆ
ದೈವಸ್ಥಾನದ ಉಗ್ರಾಣ ತುಂಬಿಸುವ ಕಾರ್ಯಕ್ರಮ ಎಪ್ರಿಲ್ 14 ರ ಭಾನುವಾರ ನಡೆಯಲಿದೆ. ಎಪ್ರಿಲ್ 15 ರ ಸೋಮವಾರ ಪ್ರಾತಃಕಾಲ 6 ರಿಂದ ಗಣಪತಿ ಹವನ, ಕಲಶಪೂಜೆ ನಡೆಯಲಿದೆ. ಬಳಿಕ ವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠೆ, ಗುಳಿಗ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆಯಲಿದೆ. ಎಪ್ರಿಲ್ 16 ರಂದು ಬೆಳಿಗ್ಗೆ 10 ಕ್ಕೆ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯಲಿದೆ. ನಂತರ ಪ್ರಸಾದ ವಿತರಣೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ಮಂಡೆಕೋಲು ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ರಹ್ಮಕಲಶೋತ್ಸವ ಸಮಿತಿ ಆದ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಹಿರಿಯರಾದ ಬಟ್ಯಪ್ಪ ಮಣಿಯಾಣಿ ಸೇರಿದಂತೆ ಬ್ರಹ್ಮಕಲಶೋತ್ಸವ ಉಪ ಸಮಿತಿಗಳ ಸಂಚಾಲಕರು ಹಾಗೂ ಇನ್ನಿತರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಗುಲದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆ
ಊರ ದೇಗುಲ ಮಂಡೆಕೋಲು ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆ ನಡೆಯಿತು. ಮಧೂರಿನ ಗುರು ಮನೋಳಿತ್ತಾಯ ಅವರು ಈ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
- Saturday
- November 23rd, 2024