ನಮ್ಮ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೆ ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ಯೌವ್ವನಾವಸ್ಥೆ ಹಾಗೂ ವೃದ್ದಾಪ್ಯ ಎನ್ನುವ ನಾಲ್ಕು ಹಂತಗಳಿರುತ್ತವೆ. ಪ್ರತಿಯೊಂದು ಹಂತಗಳಲ್ಲಿಯೂ ಕೂಡ ನಮಗೆ ಆ ಹಂತಗಳಿಗನುಗುಣವಾದ ಕರ್ತವ್ಯಗಳು ಇರುತ್ತವೆ. ಉದಾಹರಣೆಗೆ ಬಾಲ್ಯಾವಸ್ಥೆಯಲ್ಲಿ ಆಟ, ತುಂಟಾಟಗಳ ಜೊತೆಗೆ ನಡೆಯುವ, ಮಾತನಾಡುವ ಮುಂತಾದ ಪ್ರಕ್ರಿಯೆಗಳನ್ನು ಕಲಿಯುವಂತಹದ್ದು, ಹಾಗೂ ಪ್ರೌಢಾವಸ್ಥೆಯಲ್ಲಿ ಆಟ-ಪಾಠ, ಓದು-ಬರಹ ಸೇರಿದಂತೆ ಭವಿಷ್ಯದ ಬದುಕಿಗೆ ಅಡಿಪಾಯ ಹಾಕುವಂತಹ ಕರ್ತವ್ಯಗಳು ಇರುತ್ತವೆ. ಯೌವ್ವನಾವಸ್ಥೆಯಲ್ಲಿ ದುಡಿಮೆ, ಮನೆಯ ಜವಬ್ದಾರಿಗಳು ಸೇರಿದಂತೆ ಅನೇಕ ಜವಬ್ದಾರಿಗಳು ನಮ್ಮ ಹೆಗಲ ಮೇಲೆ ಬೀಳುತ್ತವೆ. ಅದೇ ರೀತಿ ವೃದ್ದಾಪ್ಯದಲ್ಲಿ ಹಿರಿಯರಾಗಿ ತಾವು ಜೀವನಪೂರ್ತಿ ಪಡೆದಂತಹ ಅನುಭವಗಳನ್ನು, ಆ ಅನುಭವಗಳಿಂದ ಕಲಿತ ಪಾಠಗಳನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತಿಳಿಸುವುದರೊಂದಿಗೆ ಅವರಿಗೆ ಯಾವ ರೀತಿ ಜೀವನ ನಡೆಸಬೇಕೆಂದು ಮಾರ್ಗದರ್ಶನ ನೀಡುವ ಕರ್ತವ್ಯಗಳು ಇರುತ್ತವೆ. ಹೀಗೆ ಬದುಕಿನ ಪ್ರತೀ ಹಂತಗಳಲ್ಲೂ ಆ ಹಂತಗಳಿಗನುಗುಣವಾಗಿ ಇರುವಂತಹ ಕರ್ತವ್ಯಗಳನ್ನು ನಿರ್ವಹಿಸಲು ನಾವು ಬದುಕಿನೊಂದಿಗೆ ಓಡುತ್ತಲೇ ಇರಬೇಕು. “ಬದುಕು ಯಾರಿಗಾಗಿಯೂ ನಿಲ್ಲುವುದಿಲ್ಲ, ನಾವು ಬದುಕಿನೊಂದಿಗೆ ಓಡಿದರೆ ಮಾತ್ರ ವರ್ತಮಾನದೊಂದಿಗೆ ಬದುಕನ್ನು ಸಾಗಿಸಲು ಸಾಧ್ಯ. ಇಲ್ಲದಿದ್ದರೆ ಬದುಕು ನಮ್ಮನ್ನು ಬಿಟ್ಟು ಮುಂದೆ ಸಾಗುತ್ತದೆ. ನಾವು ಹಿಂದೆ ಉಳಿದುಬಿಡುತ್ತೇವೆ” ಎನ್ನುವ ಮಾತಿನಂತೆ ಪ್ರತಿಯೊಬ್ಬರೂ ಕೂಡ ಅವರವರ ಬದುಕಿನ ಹಂತಗಳಿಗನುಗುಣವಾಗಿ ಓಡುತ್ತಲೇ ಇರಬೇಕು, ತಮ್ಮ ಬದುಕಿನ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಇರಬೇಕು.
ಆದರೆ ಕೆಲವೊಮ್ಮೆ ನಾವುಗಳು ನಮ್ಮ ಬದುಕಿನ ಕರ್ತವ್ಯಗಳನ್ನು ನಿರ್ವಹಿಸುವ ಭರದಲ್ಲಿ, ಬದುಕಿನೊಂದಿಗೆ ಓಡುವ ಹುಮ್ಮಸ್ಸಿನಲ್ಲಿ ಹಲವಾರು ತಪ್ಪುಗಳನ್ನು ಮಾಡುತ್ತಿರುತ್ತೇವೆ. ನಮಗೆ ತಿಳಿದೋ ತಿಳಿಯದೆಯೋ ಹಲವರ ಮನಸ್ಸಿಗೆ ನೋವುಂಟುಮಾಡುತ್ತಿರುತ್ತೇವೆ. ಆದರೆ ವಾಸ್ತವ ಏನೆಂದರೆ ಆ ಕ್ಷಣಕ್ಕೆ ನಮಗೆ ನಾವು ಮಾಡಿದ್ದು ತಪ್ಪು ಎಂದೆನಿಸುವುದಿಲ್ಲ. ಆದರೆ ನಾವು ಹಂತಹಂತವಾಗಿ ಬೆಳೆದಂತೆಲ್ಲಾ, ಬದುಕಿನಲ್ಲಿ ಮುಂದೆ ಹೋದಂತೆಲ್ಲಾ ನಮಗೆ ಬದುಕು ಎಂದರೆ ಏನೆಂದು ಅರ್ಥವಾಗುತ್ತಾ ಹೋಗುತ್ತದೆ. ಹಾಗೆ ಬೆಳೆಯುತ್ತಾ ಬೆಳೆಯುತ್ತಾ ಬದುಕಿನ ಎಲ್ಲಾ ಅನುಭವಗಳನ್ನು ಪಡೆದು, ಬದುಕಿನ ಎಲ್ಲಾ ಹಂತಗಳನ್ನು ದಾಟಿ ವೃದ್ದಾಪ್ಯವನ್ನು ತಲುಪಿದಾಗ ನಮಗೆ ಬದುಕು ಎಂದರೆ ಏನೆಂದು ಚೆನ್ನಾಗಿ ಅರ್ಥವಾಗಿರುತ್ತದೆ. ವೃದ್ದಾಪ್ಯದಲ್ಲಿ ಒಂದು ಕ್ಷಣ ನಾವು ಸಾಗಿಬಂದ ಹಾದಿಯನ್ನು ಹಿಂತಿರುಗಿ ನೋಡಿದಾಗ ಅಲ್ಲಿ ನಾವು ಸಾಗಿಬಂದ ಹಾದಿಗಳು, ಆ ಹಾದಿಯಲ್ಲಿನ ನಮ್ಮ ಯಶಸ್ಸಿನ ಹೆಜ್ಜೆಗಳು, ಪ್ರತೀ ಹೆಜ್ಜೆಗಳಲ್ಲಿ ನಾವು ಅನುಭವಿಸಿದಂಥ ಸೋಲು-ಗೆಲುವುಗಳು, ಕಷ್ಟ-ನಷ್ಟಗಳು, ನೋವು-ನಲಿವುಗಳು ಎಲ್ಲವೂ ಒಂದೊಂದಾಗಿ ಕಣ್ಮುಂದೆ ಬರುತ್ತವೆ. ಅದನ್ನೆಲ್ಲಾ ನೋಡಿದಾಗ ಮನಸ್ಸಿಗೆ ವರ್ಣಿಸಲಾಗದಷ್ಟು ಸಂತೋಷ, ಹೆಮ್ಮೆ ಎಲ್ಲವೂ ಆಗುತ್ತದೆ. ಆದರೆ ಮರುಕ್ಷಣವೇ ಆ ಸಂತೋಷ, ಹೆಮ್ಮೆ ಎಲ್ಲವೂ ಮರೆಯಾಗಿ ಹೋಗುತ್ತವೆ. ಕಾರಣ ಜೀವನದುದ್ದಕ್ಕೂ ನಾವು ತಿಳಿದೋ ತಿಳಿಯದೆಯೋ ಮಾಡಿದ ಅನೇಕ ತಪ್ಪುಗಳು, ನಮ್ಮ ತಪ್ಪುಗಳಿಂದ ಇತರರ ಮನಸ್ಸಿಗಾದ ನೋವುಗಳು ಎಲ್ಲವೂ ನಮ್ಮ ಕಣ್ಮುಂದೆ ಬರುತ್ತವೆ. ಆಗ ನಮ್ಮ ಮನಸ್ಸಿನಲ್ಲಿ ಪಶ್ಚಾತ್ತಾಪದ ದುಃಖ ಉಮ್ಮಳಿಸಿ ಬರುತ್ತದೆ. ಒಂದು ಕಡೆ ನಾವು ಸಾಗಿಬಂದ ಹಾದಿಯನ್ನು, ನಮ್ಮ ಯಶಸ್ಸಿನ ಹೆಜ್ಜೆಗಳನ್ನು ನೋಡಿ ಸಂತೋಷವಾದರೂ ಇನ್ನೊಂದು ಕಡೆ ಜೀವನದಲ್ಲಿ ನಾವು ಮಾಡಿದ ತಪ್ಪುಗಳು, ನಮ್ಮ ತಪ್ಪುಗಳಿಂದ ಇತರರು ಪಟ್ಟ ಕಷ್ಟಗಳು ಕಣ್ಮುಂದೆ ಬಂದಾಗ ಮನಸ್ಸಿಗೆ ತುಂಬಾ ದುಃಖವಾಗುತ್ತದೆ. ಆದರೆ ಮತ್ತೆ ಬದುಕಿನಲ್ಲಿ ಹಿಂತಿರುಗಿ ಹೋಗಿ ಆ ತಪ್ಪುಗಳನ್ನೆಲ್ಲಾ ಸರಿಪಡಿಸಲು ಸಾಧ್ಯವೇ ಇಲ್ಲ. “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎನ್ನುವ ಮಾತಿನಂತೆ ಜೀವನಪೂರ್ತಿ ನಾವು ಮಾಡಿದಂತಹ ತಪ್ಪುಗಳಿಗೆ ಪಶ್ಚಾತ್ತಾಪಪಡುತ್ತಾ “ತಪ್ಪು ಮಾಡುವುದು ಸಹಜ ಗುಣ, ತಿದ್ದಿ ನಡೆಯುವುದು ಮನುಜ ಗುಣ” ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತಾ ಬದುಕಿರುವಷ್ಟು ದಿನ ಇತರರ ದುಃಖಕ್ಕೆ ಕಾರಣವಾಗದೇ, ಆದಷ್ಟು ಇತರರ ಕಣ್ಣೀರನ್ನು ಒರೆಸುತ್ತಾ ಸಂತೋಷದಿಂದ ಬದುಕಬೇಕಷ್ಟೆ. ಏಕೆಂದರೆ ಸಾವು ಎನ್ನುವುದು ಅನಿರೀಕ್ಷಿತ…
✍️ಉಲ್ಲಾಸ್ ಕಜ್ಜೋಡಿ
- Saturday
- November 23rd, 2024