ಸುಳ್ಯ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪೇಟೆಗಳಲ್ಲಿ ಬೆಳ್ಳಾರೆಯೂ ಒಂದು. ಇಲ್ಲಿ ವ್ಯವಸ್ಥಿತ ರುದ್ರಭೂಮಿ ಮರೀಚಿಕೆಯಾಗಿಯೇ ಉಳಿದಿದ್ದು, ಆಡಳಿತ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಕಂದಾಯ ಇಲಾಖೆಯು ಸುಮಾರು 84 ಸೆಂಟ್ಸ್ ಜಾಗ ಮಂಜೂರು ಗೊಳಿಸಿದ್ದು ಇದರ ಅಭಿವೃದ್ಧಿಗಾಗಿ ಈಗಾಗಲೇ ಲಕ್ಷಾಂತರ ಹಣ ವ್ಯಯಿಸಲಾಗಿದೆ. ಲಕ್ಷಾಂತರ ಖರ್ಚು ಮಾಡಿ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಮಾಡಲಾಗಿದ್ದು, ಇದುವರೆಗೆ ಓರ್ವ ವ್ಯಕ್ತಿಯ ಶವ ಸಂಸ್ಕಾರವನ್ನು ಮಾಡಲು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಇದೀಗ ಉಪಯೋಗಕ್ಕೆ ಸಾಧ್ಯವಾಗದೇ ಪಾಳುಬಿದ್ದಿದೆ. ಛಾವಣಿ ಕಿತ್ತು ಹೋಗಿದೆ. ಇತ್ತೀಚೆಗೆ ಓರ್ವ ವ್ಯಕ್ತಿ ಮೃತಪಟ್ಟಾಗ ಬೆಳ್ಳಾರೆಯ ಸ್ಮಶಾನಕ್ಕೆ ತಂದಾಗ ಅಲ್ಲಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಸುಳ್ಯಕ್ಕೆ ತಂದು ಶವ ಸಂಸ್ಕಾರ ಮಾಡಿದ ಪ್ರಸಂಗವು ನಡೆದಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಮಿತಾ ರೈ ರವರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ಇದು ಕಳೆದ ಗ್ರಾಮ ಸಭೆಯಲ್ಲಿ ಪ್ರಸ್ತಾಪವಾದಾಗ ನನಗೆ ತಿಳಿದದ್ದು, ಅಲ್ಲದೇ ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಅನುದಾನಗಳು ಬಂದಿವೆ ಅದರ ಕೆಲಸಗಳು ಆಗಿವೆ ಎಂದು ಹೇಳಿದರು . ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಒಟ್ಟು 80 ಲಕ್ಷ ರೂಪಾಯಿಗಳು ತಗುಲಲಿದ್ದು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ 30 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಗೊಂಡಿದ್ದು ಅದಕ್ಕೆ ಗ್ರಾಮದವರೇ ಆದ ಆನಂದ ಎಂಬವರು ಆಕ್ಷೇಪ ಮಾಡಿದ್ದಾರೆ. ಅನುದಾನ ತಡೆಹಿಡಿಯಲು ತಾನೇ ಅರ್ಜಿ ಸಲ್ಲಿಸಿದ್ದು ಎಂದು ಅವರು ಗ್ರಾಮಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಹೀಗೆ ಸಾರ್ವಜನಿಕ ಕೆಲಸಗಳಿಗೆ ಅಡ್ಡಿಪಡಿಸಿದಲ್ಲಿ ಅಭಿವೃದ್ಧಿ ಮಾಡುವುದು ಹೇಗೆ ಸಾಧ್ಯ ಎಂದು ಹೇಳಿದರು. ಅಲ್ಲದೇ ಇದುವರೆಗಿನ ಅನುದಾನ ಬಂದ ಮಾಹಿತಿಗಳು ನನಗೆ ತಿಳಿದಿರುವ ಪ್ರಕಾರ ಮಾಜಿ ಸಚಿವರು ಶಾಸಕರಾದ ಎಸ್ ಅಂಗಾರರವರ ನೇತೃತ್ವದಲ್ಲಿ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ , ಸಂಸದರ ನಿಧಿಯಿಂದ 2.5 ಲಕ್ಷ , ಸಚಿವರ ನಿಧಿಯಿಂದ 5 ಲಕ್ಷ , ಅಲ್ಲದೆ ಶೌಚಾಲಯ ನಿರ್ಮಾಣಕ್ಕೆ ತಾಲೂಕು ಪಂಚಾಯತ್ ಅನುದಾನ ಸೇರಿದಂತೆ ಸ್ವಂತ ನಿಧಿಯಿಂದ 2 ಲಕ್ಷ ರೂಪಾಯಿಗಳಲ್ಲಿ ರಸ್ತೆ ನಿರ್ಮಾಣ ಅಲ್ಲದೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು. ಮಂಜೂರುಗೊಂಡ ಅನುದಾನ ಬಾರದೇ ಇದ್ದಲ್ಲಿ ಸ್ಮಶಾನ ನಿರ್ಮಾಣಕ್ಕೆ ಬಿಕ್ಷೆ ಬೇಡುವುದು ಅನಿವಾರ್ಯ , ರಸ್ತೆಯಲ್ಲಿ ಬಿಕ್ಷೆ ಬೇಡಿ ಸ್ಮಶಾನ ನಿರ್ಮಾಣಕ್ಕೆ ಗ್ರಾಮಸ್ಥರು ಜೊತೆಗೂಡಿ . ನಾವು ನಮ್ಮ ಗ್ರಾಮಕ್ಕೆ ಉತ್ತಮವಾದ ಒಂದು ಸಾರ್ವಜನಿಕ ಸ್ಮಶಾನಕ್ಕಾಗಿ ಈ ಹಿಂದಿನಿಂದಲೇ ಪ್ರಯತ್ನಿಸುತ್ತಿದ್ದು, ಆದರೂ ಆಗಿಲ್ಲ ಎಂಬುದು ನೋವಿನ ವಿಚಾರವಾಗಿದೆ ಎಂದು ಹೇಳಿದರು. ಅಲ್ಲದೇ ನಮ್ಮ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಮೊದಲ ಆದ್ಯತೆಯಾಗಿರಲಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ನಮಿತಾ ರೈ ಹೇಳಿದರು.
ಈ ವಿಚಾರದ ಬಗ್ಗೆ ಆನಂದ ಬೆಳ್ಳಾರೆ ಮಾತನಾಡಿ “ಇದೀಗ ಆಗುತ್ತಿರುವ ಸ್ಮಶಾನ ಎಸ್ಸಿ ಕಾಲೋನಿ ಪಕ್ಕದಲ್ಲಿ ಇದೆ. ಇಲ್ಲಿರುವ ಸುಮಾರು 10ಕ್ಕೂ ಹೆಚ್ಚು ಕುಟುಂಬಗಳು ಯಾವುದೇ ಸೌಕರ್ಯ ಮತ್ತು ಅಡಿಸ್ಥಳವಿಲ್ಲದೆ ತೊಂದರೆಗೀಡಾಗಿದ್ದಾರೆ. ಅದನ್ನು ಮೊದಲು ಗ್ರಾಮ ಪಂಚಾಯತ್ ಸರಿ ಪಡಿಸಲಿ ಎಂದು ಹೇಳಿದರು. ಅಲ್ಲದೇ ಸುಮಾರು 30 ಲಕ್ಷ ಅನುದಾನವನ್ನು ಎಸ್ಸಿ ಎಸ್ಟಿ ಅನುದಾನದಿಂದ ಕೋಟ ಶ್ರೀನಿವಾಸ್ ಪೂಜಾರಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ನೀಡಿದ್ದರು. ಆದರೆ ಇದು ಎಸ್ಸಿ ಎಸ್ಟಿ ಸಮಾಜಕ್ಕೆ ಮಾತ್ರವಲ್ಲ ಇಲ್ಲಿ ಸಾರ್ವಜನಿಕವಾಗಿ ನೀಡುತ್ತಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ತೆರಳಿ ಆಯುಕ್ತರು ಮತ್ತು ಜಿಲ್ಲೆಯ ಅಧಿಕಾರಿಗಳಿಗೆ ಪತ್ರ ನೀಡಿದ ಬಳಿಕ ಈ ಅನುದಾನವನ್ನು ತಡೆಹಿಡಿಯಲಾಗಿದೆ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಎಲ್ಲರ ಹೇಳಿಕೆಗಳು ಜನರ ಆಕ್ರೋಶಗಳನ್ನು ಗಮನಿಸಿದಾಗ ಅಧಿಕಾರಿಗಳು ಇನ್ನಾದರು ಎಚ್ಚೆತ್ತು ಬೆಳೆಯುತ್ತಿರುವ ನಗರವಾದ ಬೆಳ್ಳಾರೆಗೆ ಸುಸಜ್ಜಿತ ಸ್ಮಶಾನವನ್ನು ಮಾಡಬೇಕಿದೆ. ಜಾತಿ , ಧರ್ಮ , ಪಕ್ಷ , ಮತ ಭೇದಗಳನ್ನು ಮಾಡುತ್ತಾ ವ್ಯಕ್ತಿಗಳ ಪ್ರತಿಷ್ಠೆಗೆ ಒಳಗಾಗದೇ ಅಭಿವೃದ್ಧಿಪಡಿಸಿ ಬೆಳ್ಳಾರೆ ಗ್ರಾಮದಲ್ಲಿ ಮೃತಪಟ್ಟ ಜನರ ಸಂಸ್ಕಾರಕ್ಕೆ ಸ್ಮಶಾನ ಸಿದ್ದವಾಗಲಿ ಎನ್ನುವುದೇ ನಮ್ಮ ಆಶಯವಾಗಿದೆ.