Ad Widget

ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಮಂಡೆಕೋಲು ಮಹಾವಿಷ್ಣು ಮೂರ್ತಿ ದೇವಸ್ಥಾನ – ವೇಗ ಪಡೆದುಕೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳು

✒️ಗಣೇಶ್ ಮಾವಂಜಿ ✒️

. . . . . . .

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿದೆ. ಈ ಸಂಬಂಧ ಧಾರ್ಮಿಕ ವಿಧಿ ವಿಧಾನನಗಳು ಮುಂಬರುವ ಎಪ್ರಿಲ್ 13 ರಿಂದ ಮೊದಲ್ಗೊಂಡು ಮೇ 4 ರವರೆಗೆ ನಡೆಯಲಿದೆ‌.

ಸುಮಾರು ಆರು ವರ್ಷಗಳ ಹಿಂದೆಯೇ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರ ಭಕ್ತಾದಿಗಳು ನಿರ್ಧರಿಸಿದ್ದರೂ ಕರೋನಾ ಕಂಟಕದ ಹಿನ್ನೆಲೆಯಲ್ಲಿ ಈ ದೇವತಾ ಕಾರ್ಯಕ್ಕೆ ಮುಹೂರ್ತ ಕೂಡಿ ಬಂದಿರಲಿಲ್ಲ. ಹಾಗಿದ್ದರೂ ಬ್ರಹ್ಮಕಲಶೋತ್ಸವದ ಕಾರ್ಯಚಟುವಟಿಕೆಗಳಿಗೆ ವೇಗ ತಂದು ಕೊಡಲು ಹಾಗೂ ಆರ್ಥಕ ದೃಷ್ಟಿಯಿಂದ 2018 ರಲ್ಲೇ ದೇಗುಲದಲ್ಲಿ ಮೇಧಾ ಸಂಸ್ಕೃತಿ ಯಾಗ ಹಾಗೂ ಧನ್ವಂತರಿ ಯಾಗ ಮಾಡಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಳಿಕೆಯಾದ ಹಣದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಮಾಡಲಾಯಿತು.

ಇದೀಗ ಜೀರ್ಣೋದ್ಧಾರ ಕಾರ್ಯಕ್ರಮಗಳಿಗೆ ವೇಗ ದೊರಕಿದ್ದು ದೇವಾಲಯ ದಿನದಿಂದ ದಿನಕ್ಕೆ ಹೊಸ ಮೆರುಗು ಪಡೆಯುತ್ತಿದೆ. ಒಟ್ಟು ಸುಮಾರು ರೂ. 1.5 ಕೋಟಿ ವೆಚ್ಚದಲ್ಲಿ ದೇಗುಲದ ಅಭಿವೃದ್ಧಿ ಕಾರ್ಯಗಳಾದ ಒಳಭಾಗದ ದುರ್ಗೆಯ ಗುಡಿ ರಚನೆ, ದರ್ಪಣ ಬಿಂಬದಲ್ಲಿ ದುರ್ಗಾ ಮಾತೆಯ ಪ್ರತಿಷ್ಠೆ, ದೇವಾಲಯದ ಒಳಾಂಗಣದ ಮೇಲ್ಛಾವಣಿ, ಹೊರಾಂಗಣದ ಮುಖ್ಯ ಗೋಪುರ ರಚನೆ, ನೂತನ ವಸಂತ ಮಂಟಪ, ಹೊರಾಂಗಣಕ್ಕೆ ಗ್ರಾನೈಟ್ ನೆಲಹಾಸು, ದೇಗುಲಕ್ಕೆ ಸುತ್ತು ಕಾಂಪೌಂಡ್, ಅರ್ಚಕರ ವಸತಿ ಗೃಹ ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳೂ ಭರದಿಂದ ಸಾಗುತ್ತಲಿದೆ.

ಇದರ ಜೊತೆಯಲ್ಲೇ ಆಮಂತ್ರಣ ಪತ್ರಿಕೆಗಳ ವಿತರಣಾ ಕಾರ್ಯಕ್ರಮಗಳೂ ಭರದಿಂದ ಸಾಗುತ್ತಲಿದೆ. ಕಾರ್ಯಕ್ರಮಗಳ ಯಶಸ್ಸಿಗಾಗಿ ಬ್ರಹ್ಮಕಲಶೋತ್ಸವದ ಸಮಿತಿಯ ಜೊತೆಗೆ ಉಪ ಸಮಿತಿಗಳನ್ನೂ ಈ ಮೊದಲೇ ರಚಿಸಲಾಗಿದ್ದು ಪ್ರಮುಖರ ನೇತೃತ್ವದಲ್ಲಿ ಅಗತ್ಯ ಕೆಲಸಗಳಿಗಾಗಿ ಶ್ರಮ ಸೇವೆಯೂ ನಿರಂತರ ನಡೆಯುತ್ತಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ದೇಗುಲದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸುತ್ತಾ,
ದೇವರ ಕಾರ್ಯಕ್ಕೆ ದಿನ ನಿಶ್ಚಯ ಮಾಡಿದ ಬಳಿಕ ಪ್ರತಿಯೊಂದು ಕೆಲಸ ಕಾರ್ಯಗಳೂ ಸದ್ದಿಲ್ಲದೆ ನಡೆಯುತ್ತಿರುವುದು ಶುಭ ಸೂಚಕ ಎಂದಿದ್ದಾರೆ.

ನಿರ್ಧರಿತ ಅಭಿವೃದ್ಧಿ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದ್ದು ಬ್ರಹ್ಮಕಲಶೋತ್ಸವಕ್ಕೆ ಕೆಲ ದಿನಗಳ ಮುಂಚಿತವಾಗಿಯೇ ಎಲ್ಲಾ ಕೆಲಸಗಳೂ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

ಬ್ರಹ್ಮಕಲಶೋತ್ಸವಕ್ಕೆ ಊರ ಪರ ಊರ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇದು ದೇವರ ಕಾರ್ಯ ಸುಗಮವಾಗಿ ನೆರವೇರಲಿದೆ ಎಂಬುದನ್ನು ಮುಂಚಿತವಾಗಿಯೇ ತಿಳಿಸುವಂತಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಆಶಾವಾದ ವ್ಯಕ್ತಪಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!