
ಬೆಳ್ಳಂಬೆಳಗ್ಗೆ ಕಣ್ಣು ಬಿಡುವುದಕ್ಕಿಂತ ಮುಂಚೆಯೇ ಅಮ್ಮನ “ಟ್ಯೂಶನ್‌ಗೆ ಲೇಟ್ ಆಯ್ತು ಏಳೋ ಎನ್ನುವ ಸುಪ್ರಭಾತದಿಂದ ಆರಂಭಿಸಿ ಸಂಜೆಯ ಸಂಗೀತ ಕ್ಲಾಸೋ, ನೃತ್ಯದ ತರಗತಿಯೋ, ಮತ್ತಿನ್ಯಾವುದೋ ಅಪ್ಪ ಅಮ್ಮಂದಿರ ಘನತೆ ಮೆರೆಸುವ ಹುಚ್ಚಾಟದ ತರಗತಿಗಳಿಗೆ ಹೋಗಿ ಮನೆ ಸೇರುವ ಹೊತ್ತಿಗೆ ಮನೆಯಲ್ಲಿ ಹೋಂ ವರ್ಕ್ ಆಗಿಲ್ಲವಾ ಇನ್ನೂ ಎಂಬ ನಿತ್ಯ ಶ್ಲೋಕ.
ಹಮಾಲಿಯಂತೆ ದೊಡ್ಡ ದೊಡ್ಡ ಚೀಲದಲ್ಲಿ ಪುಸ್ತಕಗಳ ಹೊತ್ತು ತಿರುಗಿಬಂದ ಮಗುವಿಗೆ ಆಗುವ ಸುಸ್ತುಗಳು, ಪೋಷಕರ ಧಾವಂತದಲ್ಲಿ ತಿಂದರೂ ತಿನ್ನದಂತಾಗಿರೋ ಊಟ ತಿಂಡಿಗಳು, ಭಾಷೆಯ ನೆವದಲ್ಲಿ ಭಾವಗಳನ್ನು ಕೊಂದು ಮೂಕರನ್ನಾಗಿಸಿ ಪಂಜರದ ಪಕ್ಷಿಗಳಂತಾಗಿರುವ ಮಕ್ಕಳ ಮನಸ್ಸುಗಳು, ಪರೀಕ್ಷೆಗಳು ಮತ್ತು ಅಂಕಗಳನ್ನು ಮಾತ್ರವೇ ಗುರಿಯನ್ನಾಗಿ ಮಾಡಿಕೊಂಡ ವರ್ಷದ ಎಲ್ಲಾ ಇಪ್ಪತ್ನಾಲ್ಕು ಗಂಟೆಗಳ ಪುರಾಣ ಪ್ರವಚನಗಳನ್ನು ಮುಗಿದು ಜೀವನದ ಅಂತಿಮ ಗುರಿಯೋ ಎನ್ನುವಂತೆ ಪರೀಕ್ಷೆ ಬರೆಸಿ ನಿರಮ್ಮಳವಾಗಿ ಕೂರದೆ ಹೊಸ ಹೊಸ ಯೋಜನೆಗಳ ಮೂಲಕ ರಜೆಯಲ್ಲಿ ಮತ್ತೆ ಮತ್ತೆ ಮಗುವನ್ನು ಹಿಂಡಿಹಾಕುವ ಪೋಷಕರ ಜೊತೆ ನಾಲ್ಕಾರು ಮಾತಾನಾಡುವ ಇಚ್ಛೆ ನನ್ನದು.
ನಿಮ್ಮ ಮಗುವನ್ನು ಕೇವಲ ಎಟಿಎಂ ಯಂತ್ರವನ್ನಾಗಿ ಮಾಡಬೇಕು ಅಂತಲೋ ಅಥವಾ ಹಣ ನಮೂದಿಸದ ಖಾಲಿ ಚೆಕ್ ಪುಸ್ತಕವನ್ನಾಗಿ ಮಾಡಬೇಕು
ಅಂತಲೋ ಅಂದುಕೊಂಡಿದ್ದಲ್ಲಿ ಮೇಲಿನ ನಿಮ್ಮ ಪ್ರಯತ್ನಗಳು ಮುಂದುವರೆಯಲಿ. ನಿಮ್ಮ ಮಗ ಅಥವಾ ನಿಮ್ಮ ಮಗಳು, ಆಕೆಯ ಅಥವಾ ಆತನ ಜೀವನದಲ್ಲಿ ಉತ್ತಮ ಮನುಷ್ಯರಾಗಿ, ಅವರವರ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ, ಜೀವನದ ರಸವನ್ನು ಮೊಗೆ ಮೊಗೆದು ಕುಡಿಯುವ, ಜೀವನದ ನೋವು-ನಲಿವುಗಳನ್ನು ಸಮನಾಗಿ ಸಂಭ್ರಮಿಸುವ ಎಲ್ಲದಕ್ಕೂ ಮಿಗಿಲಾಗಿ ಮನುಷ್ಯರಂತೆ ಬಾಳಲಿ ಎಂದು ಭಾವಿಸಿದ್ದಲ್ಲಿ ವರ್ಷದಲ್ಲಿ ಸಿಗುವ ಅತೀ ಕಡಿಮೆ ರಜೆಯಲ್ಲಿ ಅವರು ಅವರಾಗಿಯೇ ಬೆಳೆಯುವಂತಾಗಲು ಅವಕಾಶ ಮಾಡಿಕೊಡಿ.
ಹುಟ್ಟಿದ ಊರಿಂದ ದೂರವಿದ್ದಲ್ಲಿ ನಿಮ್ಮ ಕೆಲಸಕ್ಕೆ ಒಂದಷ್ಟು ದಿನ ರಜೆ ಹಾಕಿ ಮಕ್ಕಳೊಂದಿಗೆ ಆ ಹಳ್ಳಿಗೆ ಹೊರಟುಹೋಗಿ, ಮೊಮ್ಮಕ್ಕಳು ಅಜ್ಜ-ಅಜ್ಜಿಯರ ಮನೆ ಸೇರಲಿ. ಅಜ್ಜ-ಅಜ್ಜಿಯರು ಹಳೆಯ ಕಾಲದ ಸರಕು ಎಂಬ ನಿಮ್ಮ ಅಜ್ಞಾನವನ್ನು ಮಣ್ಣಿನಲ್ಲಿ ಹೂತುಹಾಕಿ. ಮೊಮ್ಮಕ್ಕಳು ಅಜ್ಜ ಅಜ್ಜಿಯರ ತೊಡೆಯ ಮೇಲೆ ತಮ್ಮ ರಜೆ ಕಳೆಯಲಿ. ಅವರ ಅಪ್ಪುಗೆ, ಸ್ಪರ್ಶದ ಅನುಭೂತಿಯನ್ನು ನೀವು ಕೊಡಿಸುವ ಯಾವ ಬೇಸಿಗೆ ಶಿಬಿರವೂ ನೀಡಲಾರದು. ಅವರು ಹೇಳುವ ಕಥೆಗಳ ಮುಂದೆ ಯಾವ ಕಾರ್ಟೂನ್ಸ್ ಸಿನಿಮಾಗಳು ನಿಲ್ಲಲಾರವು. ಅವರ ಪ್ರೀತಿಗಿಂತ ದೊಡ್ಡ ಸಂಗತಿ ಬಹುಶಃ ನಿಮ್ಮ ಮಗುವಿಗೆ ಈ ಬದುಕಿನಲ್ಲಿ ಸಿಗಲಾರದು. ಮೌಲ್ಯ ಮತ್ತು ಮನರಂಜನೆ ಮೂರ್ತವೆತ್ತ ರೂಪಕಗಳವು.
ಹಳ್ಳಿಯ ಬದುಕಿನಲ್ಲಿ ಆತ್ಮೀಯತೆ, ಮುಗ್ಧತೆ, ಸಹಕಾರ ತತ್ವಗಳು ಎಷ್ಟೊಂದು ಹಾಸುಹೊಕ್ಕಾಗಿವೆ ಮತ್ತು ಇಡೀ ಹಳ್ಳಿಯೊಂದು ಮನೆಯಂತೆ ನಡೆದುಕೊಳ್ಳುವ ರೀತಿಯನ್ನು ನಿಮ್ಮ ಮಗು ಅರಿಯಿಲಿ. ಮಗುವಿಗೆ ಮಣ್ಣಿನಲ್ಲಿ ಆಡುವುದಕ್ಕೆ ಬಿಡಿ, ಆ ಮಣ್ಣಿನ ಸೊಬಗಿನ ಸವಿಗಂಪನ್ನು ಮಗು ಆಘ್ರಾಣಿಸಲಿ. ಹಳ್ಳಿಯ ಮಕ್ಕಳೊಂದಿಗೆ ಬೆರೆಯುವುದಕ್ಕೆ ಅವಕಾಶ ಮಾಡಿಕೊಡಿ. ಅಲ್ಲಿಯ ಮಕ್ಕಳ ಬದುಕಿನೊಂದಿಗೆ ಮಗು ತನ್ನ ಬದುಕನ್ನು ಹೋಲಿಸಿಕೊಳ್ಳಲಿ. ಬಿಸಿಲಿನಲ್ಲಿ ಬೆವರಲಿ, ಬೆವರ ಹನಿಗಳ ಪರಿಚಯವಾಗಲಿ. ಹಳ್ಳಿಯ ಆಟಗಳನ್ನಾಡಲಿ. ಆಟವೆಂದರೆ ಕೇವಲ ಕ್ರಿಕೆಟ್ ಅಥವಾ ವಿಡಿಯೋ ಗೇಮ್ಸ್ ಅಂದುಕೊಂಡಿರುವ ಮಗುವು ಗೋಲಿ, ಬುಗರಿ, ಒಂಟಿಕಾಲಿನ ಆಟ ಮರಕೋತಿ, ಚೌಕಬಾರ ಆಟಗಳ ಸಂತಸವನ್ನು, ಅದರ ಹಿಂದಿರುವ ಮೌಲ್ಯಗಳನ್ನು ಮನತುಂಬಿಸಿಕೊಳ್ಳಲಿ.
ಬಿಡುವಿದ್ದಾಗ ಹೊಲ, ಗದ್ದೆಗಳ ಕಡೆ ಕರೆದೊಯ್ಯಿರಿ. ಕಟ್ಟಿದ ಇರುವೆಗಳ ಗೂಡು, ಅವುಗಳ ಬದುಕಿನ ಕೌತುಕ, ಮೊಳಕೆ ಒಡೆದ ಬೀಜ, ಆಗ ತಾನೆ ಚಿಗುರಿದ ಎರಡೆಲೆಗಳು, ಹಾರುವ ದುಂಬಿಗಳು, ಹಾಡುವ ಪಕ್ಷಿಗಳು, ಹರಿಯುವ ನದಿ, ತುಂಬಿದ ಕೆರೆ, ಭೂಮಿತಾಯಿ ಹಸಿರು ಸೀರೆ ತೊಟ್ಟಂತೇ ತೋರುವ ಬತ್ತದ ಪೈರು ,ಹಳ್ಳಿಯ ಸೊಗಸು, ರೈತನ ಬಾಳು, ದನ ಕರುಗಳು ಮೇಯುವ ಠೀವಿ ಇವೆಲ್ಲಾ ಯಾವ ಫ್ಯಾಂಟಿಸಿ ಪಾರ್ಕ್‌ನಲ್ಲಿ ಸಿಕ್ಕಾವು!?
ನನಗಂತೂ ಮರೆಯಲು ಅಸಾದ್ಯ
ಮಾಯಿಲಪ್ಪ ಗೌಡರ ಮನೆಗೆ ಹೋಗುವ ದಾರಿನಡುವಿನ ಬೀಟೆ ಮರ , ನಡುವೆ ಕಾಡುಮಾವಿನ ಮರದ ಸುತ್ತ ಹಣ್ಣಿಗಾಗಿ ಕಾಯುವ ಮಕ್ಕಳ ಜಾತ್ರೆ .ಇತ್ತ ನೋಡಿದರೆ ಕಾಪುಮಲೆಯ ಬ್ರಹತ್ ಆಕಾರದ ನೆಕ್ಕರೆ ಮಾವಿನ ಮರ.. ಮೇಲಿನಿಂದ ಗೇರುಹಣ್ಣಿಗಾಗಿ ಹಾಗಮಿಸುತ್ತಿರುವ ದುಗ್ಗಮ್ಮ ಅಜ್ಜಿ ..ಕಾರ್ಕಳದಿಂದ ಬಾಳೆಗೊನೆ ತರಕಾರಿಗಳನ್ನು ಮಡಕೆಯಲ್ಲಿ ತುಂಬಿತರುವ ಕುಂಬಳಚೇರಿ ಕಾದರ್ ಬಾಯಿ . ಇತ್ತ ಕಡೆಯಿಂದ ರಾತ್ರಿಯಾಗುತಿದ್ದಂತೇ ಸಮುದ್ರದ ದಡದಲ್ಲಿ ಹಡಗಿಗಾಗಿ ನಿರ್ಮಿಸಿರುವ ದ್ವೀಪಸ್ಥಂಭದಂತೇ ಆಕಾಶಕ್ಕೆ ಟೋರ್ಚ್ ತೋರಿಸಿ ಮನೆಯಿಂದ ಹೊರಡುವ ಅಲವಿಯಾಕ. ಹೀಗೇ ಮುಗಿಯಲಾರದಸ್ಟು .
ಅಜ್ಜಿ ಮಾಡಿದ ರೊಟ್ಟಿ, ಚಟ್ನಿ, ಗಂಜಿ ಒಣಮೀನಿನ ಊಟ, ಕೆನೆ ಮೊಸರಿನ ಸವಿ, ಕಡುಬು ಕಲ್ತಪ್ಪದ ತಾಕತ್ತಿನ ಮುಂದೆ ಪಿಝಾ ಬರ್ಗರ್ ನಿಲ್ಲಲಾರವು ಎಂಬುದನ್ನು ಅವರು ಅರಿತುಕೊಳ್ಳಲಿ. ಊರಿನ ಒಗ್ಗಟ್ಟು, ಅಲ್ಲಿನ ಶಿಸ್ತುಬದ್ಧ ಜೀವನ, ಕೊಡು-ಕೊಳ್ಳುವ ಬಾಳ್ವೆ, ಸದಾ ಸಹಾಯಕ್ಕೆ ಧಾವಿಸುವ ಆವರ ಒಳ್ಳೆಯತನ, ಪ್ರಕೃತಿಯಿಂದ ಅವರು ಕಲಿಯುವ ಪಾಠ, ಹಬ್ಬ ಹರಿದಿನಗಳ ಸೊಗಸು, ಮುಗ್ಧತೆಯಲ್ಲಿಯೇ ಅವರು ಅನುಭವಿಸುವ ಖುಷಿಯನ್ನು ಕಲಿತುಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿ.
ರೈತನ ಕಷ್ಟದ ಬದುಕನ್ನು ಪರಿಚಯಿಸಿ, ಬರಿದಾದ ಕೆರೆಯನ್ನು ತೋರಿಸಿ, ಒಣಗಿದ ಬೆಳೆಯನ್ನು
(ನಮ್ಮ ಸುಳ್ಯದಲ್ಲಂತೂ ಅಪರೂಪ ) ತೋರಿಸಿ, ನೀರಿಲ್ಲಿದೆ ಪರಿತಪಿಸುವ ಪಶು ಪಕ್ಷಿಗಳನ್ನು ಕಣ್ಮುಂದಿರಿಸಿ.
ಪ್ರಕೃತಿಯೊಂದಿಗೆ ಹೊಂದಿಕೊಂಡು ಅದನ್ನೇ ದೇವರೆಂದು ಭಾವಿಸುವ, ಪೂಜಿಸುವ ಹಳ್ಳಿಯ ಜನರ ಪ್ರಕೃತಿಪರ ಕಾಳಜಿ, ಸೌಜನ್ಯವನ್ನು, ನಿಷ್ಠೆಯನ್ನು ಮಗು ತಿಳಿಯಿಲಿ. ಇಡೀ ಮಾನವ ಕುಲವನ್ನು ಸಾಕುತ್ತಿರುವ ಈ ಹೊಲಗದ್ದೆಗಳು ಮತ್ತು ಅದರೊಳಗೆ ಒಂದಾಗಿ ದುಡಿಯುತ್ತಿರುವ ನೇಗಿಲಯೋಗಿಯ ಮುಂದೆ ಯಾವ ಯೋಗಿಯೂ ಇಲ್ಲ ಎಂಬ ಸತ್ಯವನ್ನು ಮಗು ಅರಿಯಲಿ.
ಕಂಪ್ಯೂಟರ್ ಕುಟ್ಟುತ್ತಾ ಕೂರುವುದು, ಸ್ಟೆಥಸ್ಕೋಪ್ ಹಿಡಿಯುವುದೇ ಜೀವನದ ಮಹಾನ್ ಗುರಿಯೆಂದುಕೊಂಡ ಮಗುವು ರೈತನನ್ನು, ಹಳ್ಳಿಯ ಬದುಕನ್ನು ನೋಡಿ ಇನ್ನೊಬ್ಬರಿಗಾಗಿ ಬದುಕುವುದೇ ನಿಜವಾದ ಬದುಕು ಎಂದು ಅರಿತುಕೊಳ್ಳದಿದ್ದರೆ ಕೇಳಿ! ಯಾವ ಬೇಸಿಗೆ ಶಿಬಿರದಲ್ಲೂ, ಕಾನ್ವೆಂಟ್‌ಗಳ ಇಂಗ್ಲಿಷ್ ಪಿಟೀಲ್ ಶಬ್ದದಲ್ಲೂ, ದುಡ್ಡು ಸುರಿದು ದುಡ್ಡು ಮಾಡುವೆ ಎಂದು ತಮ್ಮ ವ್ಯಕ್ತಿತ್ವವನ್ನೇ ವ್ಯವಹಾರದ ಸರಕನ್ನಾಗಿಸಿಕೊಳ್ಳುವ ಶಿಕ್ಷಣ ಕ್ರಮದಲ್ಲೂ ಸಿಗದ ಬದುಕಿನ ಪಾಠ ಮಕ್ಕಳಿಗೆ ಇಲ್ಲಿ ಸಿಗುತ್ತದೆ. ಹಳ್ಳಿ ಮತ್ತು ಹಳ್ಳಿಯೊಂದಿಗೆ ಬದುಕುವ ರೈತ ಮತ್ತು ಆತನ ಬದುಕು ಕಲಿಸಿಕೊಡುವ ಪಾಠವನ್ನು ಯಾವ ಆಕ್ಸ್ ಫರ್ಡ್ ಯುನಿವರ್ಸಿಟಿಯೂ ಕಲಿಸಿಕೊಡಲಾಗದು. ಅಲ್ಲವೇ?
ಮುಝಂಮ್ಮಿಲ್ ಅಂಜಿಕ್ಕಾರ್ (ಹವ್ಯಾಸಿ ಬರಹಗಾರ )
Ph : 8105706225, 9449506225