ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಈ ವರ್ಷ ಎ.13 ರಿಂದ 20ರ ವರೆಗೆ ರಾಜ್ಯಮಟ್ಟದ ಮಕ್ಕಳ ಅಭಿನಯ ಶಿಬಿರ ‘ಚಿಣ್ಣರಮೇಳ 2024 ‘ ನ್ನು ಏರ್ಪಡಿಸಲಾಗಿದೆ.
ರಂಗಮಾಂತ್ರಿಕ ಡಾ| ಜೀವನ್ ರಾಂ ಸುಳ್ಯರ ಸಾರಥ್ಯದಲ್ಲಿ 33 ನೇ ವರ್ಷದ ಶಿಬಿರ ಇದಾಗಿದ್ದು ನೀನಾಸಂ,ರಂಗಾಯಣ ಮುಂತಾದ ಕಡೆಗಳಲ್ಲಿ ರಂಗಪದವಿಯನ್ನು ಪಡೆದ ಅನುಭವೀ ರಂಗಕರ್ಮಿಗಳಿಂದ ಮಕ್ಕಳಿಗೆ ರಂಗವೈವಿಧ್ಯಮಯ ಪಾಠಗಳು ನಡೆಯಲಿದೆ.
ಅಭಿನಯ ಪ್ರಧಾನವಾದ ಈ ಶಿಬಿರದಲ್ಲಿ ಬಹಳ ಮುಖ್ಯವಾಗಿ ರಂಗಾಭಿನಯ, ಮಾತುಗಾರಿಕೆ, ರಂಗದಾಟಗಳು, ರಂಗಗೀತೆ, ಕಥಾಭಿನಯ, ಅಭಿನಯಗೀತೆ, ಸ್ವರಾನುಕರಣೆ, ಆತ್ಮವಿಶ್ವಾಸ ಮೂಡಿಸುವ ಗುಂಪು ಚಟುವಟಿಕೆಗಳು , ಜನಪದ ಸಂಗತಿಗಳು, ನಾಟಕ ತಯಾರಿ ಮತ್ತು ಪ್ರದರ್ಶನ ಅಲ್ಲದೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಕ್ರಾಫ್ಟ್-ಚಿತ್ರಕಲೆ, ಮುಖವರ್ಣಿಕೆಗಳೂ ಸೇರಿದಂತೆ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ವಿಚಾರಗಳು ಶಿಬಿರದಲ್ಲಿ ಇರಲಿವೆ.
ಸಮಾರೋಪದಂದು ಪ್ರತಿಯೊಬ್ಬ ಮಗುವೂ ವೇದಿಕೆಯೇರಿ ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ.
ಈ ಹಿಂದೆ ರಂಗಮನೆ ಶಿಬಿರದಲ್ಲಿ ಭಾಗವಹಿಸಿ ಈ ವರ್ಷವೂ ಬರುವ ಮಕ್ಕಳಿಗೆ ಅನೇಕ ಹೊಸ ವಿಚಾರಗಳು ಸಿಗಲಿವೆ.
ಸ್ವಚ್ಛ, ಸುಂದರ ಕಲಾತ್ಮಕ ಪರಿಸರದಲ್ಲಿ ಮೂಡಿ ಬರಲಿರುವ ಈ ಶಿಬಿರದಲ್ಲಿ 6 ರಿಂದ 15 ವರ್ಷದೊಳಗಿನ ಆಸಕ್ತ ಮಕ್ಕಳಿಗೆ ಭಾಗವಹಿಸಲು ಅವಕಾಶವಿದ್ದು, ಈಗಾಗಲೇ ನೋಂದಾವಣಿ ಆರಂಭಗೊಂಡಿರುತ್ತದೆ. ಮಾರ್ಚ್ 31 ರಂದು ಭಾನುವಾರ ರಂಗಮನೆಯಲ್ಲಿ ಅರ್ಜಿಯನ್ನು ನೀಡಲಾಗುವುದು. ಮತ್ತು ಅದೇ ದಿನ ನೊಂದಾವಣಿ ಕೊನೆಯಾಗಿರುತ್ತದೆ.
ಮಾಹಿತಿಗಾಗಿ 9448215946 ಜೀವನ್ ರಾಂ ಸುಳ್ಯ , 9449640013 ಶ್ರೀಹರಿ ಪೈಂದೋಡಿ, 8660306473 ರವೀಶ್ ಪಡ್ಡಂಬೈಲ್,
9449331609 ಪ್ರಸನ್ನ ಐವರ್ನಾಡು ಇವರನ್ನು ಸಂಪರ್ಕಿಸಬಹುದು ಎಂದು ರಂಗಮನೆಯ ಪದಾಧಿಕಾರಿಗಳಾದ ಕೆ. ಕೃಷ್ಣಮೂರ್ತಿ ಮತ್ತು ಡಾ. ವಿದ್ಯಾ ಶಾರದ ತಿಳಿಸಿರುತ್ತಾರೆ.
ಜೀವನ ಪಾಠ ಕಲಿಸುವ ರಂಗಮನೆ ಚಿಣ್ಣರಮೇಳ
33 ವರ್ಷದ ನನ್ನ ರಂಗಭೂಮಿಯ ವೃತ್ತಿ ಬದುಕಿನಲ್ಲಿ ಲಕ್ಷಕ್ಕಿಂತ ಹೆಚ್ಚು ಮಕ್ಕಳೊಂದಿಗೆ ಮಕ್ಕಳಾಗಿ ಅಭಿನಯ, ಆಟ, ನಾಟಕ, ಹಾಡು, ಕುಣಿತ ಅಂತ ಅನೇಕ ವಿಚಾರಗಳನ್ನು ಕಲಿಸುತ್ತಾ ಕಲಿಯುತ್ತಾ ಬೆಳೆದವನು ನಾನು.
ಈ ನನ್ನ ದೀರ್ಘ ರಂಗಾನುಭವದ ಆಧಾರದಲ್ಲಿ ಪ್ರತಿವರ್ಷವೂ ಶಿಬಿರವನ್ನು ಭಿನ್ನವಾಗಿ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಶಿಬಿರದ ವಿಷಯಗಳು ಎಂದೂ ಮಕ್ಕಳಿಗೆ ಹೊರೆ ಆಗದಂತೆ ಎಚ್ಚರ ವಹಿಸುತ್ತೇನೆ. ರಂಗಮನೆಯ ಶಿಬಿರದಲ್ಲಿ ಮಕ್ಕಳ ಸೃಜನಶೀಲತೆಯನ್ನು ವೃದ್ಧಿಸುವ, ದೇಸೀ ಕಲೆಯ ಬಗ್ಗೆ ಅವರಲ್ಲಿ ಆಸಕ್ತಿ ಹೆಚ್ಚಿಸುವ, ಮಕ್ಕಳು ನೀರು ಮತ್ತು ಅನ್ನದ ಮಹತ್ವವನ್ನು ಅರಿಯುವ, ಮಕ್ಕಳಿಗೆ ಜೀವನ ಪಾಠವನ್ನು ಕಲಿಸುವ ಶಿಬಿರವಾಗುವತ್ತ ಹೆಚ್ಚು ಗಮನ ಹರಿಸುತ್ತೇನೆ. ಈ ಸಲ ಕ್ರಾಫ್ಟ್ ಚಿತ್ರಕಲೆ ಕ್ಲೇ ಇದಕ್ಕೆಲ್ಲ ಹೆಚ್ಚು ಗಮನ ಕೊಡದೇ ನಾನೊಬ್ಬ ರಂಗಕರ್ಮಿಯಾಗಿ ಪ್ರತಿಯೊಬ್ಬರಿಗೂ ಅಗತ್ಯವಾದ ಅಭಿನಯ ಕಲೆಗೇ ಹೆಚ್ಚು ಗಮನ ನೀಡಿ ಶಿಬಿರವನ್ನು ಯೋಜಿಸಲಾಗಿದೆ. ಈ ತರಹದ ಶಿಬಿರವನ್ನುಮಾಡಬೇಕೆಂಬುದು ಅನೇಕ ಹೆತ್ತವರ ಒತ್ತಾಸೆಯೂ ಕಾರಣವಾಗಿದೆ..ಇದನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮಕ್ಕಳ ಸಂಖ್ಯೆಯನ್ನು 150 ಕ್ಕೆ ಸೀಮಿತಗೊಳಿಸಿದ್ದೇವೆ.
—- ಡಾ|ಜೀವನ್ ರಾಂ ಸುಳ್ಯ
ಅಧ್ಯಕ್ಷರು, ರಂಗಮನೆ
- Thursday
- November 21st, 2024