
ವ್ಯಕ್ತಿಯೊಬ್ಬರ ಮೈಮೇಲೆ ದನ ಬಿದ್ದು ತೀವ್ರ ಜಖಂಗೊಂಡು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದ ಘಟನೆ ಚೊಕ್ಕಾಡಿಯಿಂದ ವರದಿಯಾಗಿದೆ.
ಅಮರಪಡೂರು ಗ್ರಾಮದ ಚೊಕ್ಕಾಡಿಯ ನಿವಾಸಿ ನಡುಗಲ್ಲು ರಾಧಾಕೃಷ್ಣರವರು ಫೆ.27 ರಂದು ತಮ್ಮ ದನವನ್ನು
ಮೇಯಿಸಲು ಕಟ್ಟಿ ಹಾಕಲೆಂದು ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ಬರೆಯಲ್ಲಿ ಜಾರಿ ಬಿದ್ದರು. ಈ ವೇಳೆ ದನದ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಅವರ ಕೈಯಲ್ಲಿದ್ದುದರಿಂದ ಎಳೆಯಲ್ಪಟ್ಟು ದನವು ಅವರ ಮೈಮೇಲೆ ಬಿದ್ದಿತು. ಅಲ್ಲಿದ್ದ ಕೊಕ್ಕೋ ಮರ ಮತ್ತು ಬರೆಯ ಮಧ್ಯದಲ್ಲಿ ರಾಧಾಕೃಷ್ಣರು ಸಿಲುಕಲ್ಪಟ್ಟು ತೀವ್ರ ಜಖಂಗೊಂಡರು. ವಿಷಯ ತಿಳಿದು ಅವರ ಪತ್ನಿ ಮತ್ತು ಪಕ್ಕದ ಅಂಗಡಿಯ ಚಂದ್ರಶೇಖರರವರು ಧಾವಿಸಿ ಅವರನ್ನ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ರಮಾ, ಮಕ್ಕಳಾದ ತೇಜಸ್ ಮತ್ತು ಜಿತೇಶ್, ಸಹೋದರರಾದ ಮೋಹನ್
ಗಿರೀಶ್, ನಿತ್ಯಾನಂದ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
