ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಶಾಖಾಹಾರಿ ಎಂಬ ಚಿತ್ರ ಮೂಡಿಬರುತ್ತಿದ್ದು, ಇದಕ್ಕೆ ಸುಳ್ಯದ ಯುವ ಪ್ರತಿಭೆ ಮಯೂರ ಅಂಬೆಕಲ್ಲು ಸಂಗೀತ ನಿರ್ದೇಶನ ನೀಡಿದ್ದಾರೆ. ಶಾಖಾಹಾರಿ ಚಿತ್ರದ ಮೂಲಕ ಸುಳ್ಯದ ತೆರೆಮರೆಯ ಪ್ರತಿಭೆಯೊಂದು ಅನಾವರಗೊಂಡಿದೆ. ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಅಂಬೆಕಲ್ಲು ಮನೆತನದವರಾದ ಮಯೂರ್, ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಹಾಗೂ ಅಶ್ವಿನಿ ಶೈಲೇಶ್ ದಂಪತಿಗಳ ಪುತ್ರ. ಮಯೂರ್ ನ ತಂಗಿ ಕ್ಷಮಾ ಅಂಬೆಕಲ್ಲು ಮೈಸೂರಿನ ಮಾತಾ ವಿದ್ಯಾಪೀಠದಲ್ಲಿ ವಿಶುವಲ್ ಕಮ್ಯುನಿಕೇಶನ್ ನ 3 ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ಸಂಗೀತದ ಆಸಕ್ತಿ ಹೊಂದಿದ್ದ ಮಯೂರ್ ಅಂಬೆಕಲ್ಲು ಭಾವನಾ ಬಳಗ ಕೆ.ಆರ್.ಗೋಪಾಲಕೃಷ್ಣ ಇವರ ಶಿಷ್ಯ. ರಂಗಮನೆಯ ಜೀವನ್ ರಾಂ ಅವರ ಬಳಿ ಕೂಡ ಪಳಗಿರುವ ಮಯೂರ್ ಉತ್ತಮ ಚಿತ್ರ ಕಲಾವಿದ. ಶ್ರೀಹರಿ ಪೈಂದೋಡಿ ಹಾಗೂ ಪ್ರಸನ್ನ ಐವರ್ನಾಡು ಇವರಿಂದ ಚಿತ್ರಕಲೆ ಅಭ್ಯಸಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿರುತ್ತಾರೆ.
ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ಸೈಂಟ್ ಬ್ರಿಜಿಡ್ಸ್ , ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಆಳ್ವಾಸ್ ನಲ್ಲಿ ಹಾಗೂ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ.
ಶಾಖಾಹಾರಿ ಚಿತ್ರದ ಬಗ್ಗೆ :
ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ. ಮಲೆನಾಡಿನ ತೀರ್ಥಹಳ್ಳಿಯ ಊರೊಂದರಲ್ಲಿ ನಡೆಯುವ ನಿಗೂಢ ಘಟನೆಗಳ ಸುತ್ತ ಸಾಗುವ ಕಥೆ ಇದಾಗಿದ್ದು, ಹೋಟೆಲ್ ಭಟ್ಟರಾಗಿ ರಂಗಾಯಣ ರಘು, ಎಸ್.ಐ ಆಗಿ ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಹರಿಣಿ, ಪ್ರತಿಮಾ ನಾಯಕ್, ನಿಧಿ ಹೆಗ್ಡೆ, ಶ್ರೀಹರ್ಷ ಮತ್ತಿತರು ತಾರಾ ಬಳಗದಲ್ಲಿದ್ದಾರೆ. ಶಾಖಾಹಾರಿ ಸಿನಿಮಾದಲ್ಲಿ ರಂಗಾಯಣ ರಘು ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸಂದೀಪ್ ಸುಂಕ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಕೀಳಂಬಿ ಮೀಡಿಯಾ ಬ್ಯಾನರ್ ನಲ್ಲಿ ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಒಟ್ಟಾಗಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.