‘ ಮನದಲ್ಲಿ ಅರಳುವ ಚಿತ್ರಣವನ್ನು ಗಾಯನದ ಮೂಲಕ ಅನಾವರಣಗೊಳಿಸಲು ಸುಗಮ ಸಂಗೀತದಲ್ಲಿ ಸಾಧ್ಯವಿದೆ. ಕವಿತ್ವದ ಅರಳುವಿಕೆ ಇಲ್ಲಿ ಸಾಧ್ಯ ‘ ಎಂದು ಕವಿ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸುಳ್ಯ ರಂಗಮನೆಯಲ್ಲಿ ನಡೆದ
ಸಂಗಮ ಕಲಾ ಕ್ಷೇತ್ರ (ರಿ)ಟ್ರಸ್ಟ್ ಬೆಂಗಳೂರು ಹಾಗೂ ಗಣೇಶ್ ಮ್ಯೂಸಿಕಲ್ಸ್ ಸುಳ್ಯ ದ.ಕ ಹಾಗೂ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ರಮೇಶ್ ಚಂದ್ರ ಬೆಂಗಳೂರು ಇವರಿಂದ ನಡೆದ ಸುಗಮ ಸಂಗೀತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗಾಯಕ ರಮೇಶ್ಚಂದ್ರ ಬೆಂಗಳೂರು ಮಾತನಾಡುತ್ತಾ ” ಪ್ರತಿಭಾನ್ವಿತ ಗಾಯಕರನ್ನು ಕೊಟ್ಟ ನಾಡು ನಮ್ಮದು. ಕಠಿಣ ಪರಿಶ್ರಮದಿಂದ ಮಾತ್ರ ಗಾಯಕನಾಗಲು ಸಾಧ್ಯ.ರಂಗಮನೆಯ ಈ ವಾತಾವರಣ ಕಲಿಕೆಗೆ ಯೋಗ್ಯವಾಗಿದೆ’ ಎಂದರು.
ಸುಳ್ಯ ಕಾಸರಗೋಡು ಸೇರಿದಂತೆ ಸುತ್ತಮುತ್ತಲಿನ ಸುಮಾರು 50 ಜನರು ಶಿಬಿರಾರ್ಥಿಯಾಗಿ ಭಾಗವಹಿಸಿದ್ದರು.
ಸಮಾರೋಪದಲ್ಲಿ ರಮೇಶ್ಚಂದ್ರರಿಂದ ಕಲಿತ ಜಯ ಭಾರತ ಜನನಿಯ ತನುಜಾತೆ ನಾಡಗೀತೆ ಸೇರಿದಂತೆ ಆಕಾಶಕೆದ್ದು ನಿಂತ, ಐದು ಬೆರಳು ಸೇರಿ ಸಮಷ್ಠಿಯು, ವಿಶ್ವ ವಿನೂತನ ವಿದ್ಯಾಚೇತನ, ಮುನಿಸು ತರವೇ ಮುಂತಾದ ಗೀತೆಗಳನ್ನು ಎಲ್ಲರೂ ಒಕ್ಕೊರಲಿನಿಂದ ಹಾಡಿದರು.
ನಂತರದಲ್ಲಿ ರಮೇಶ್ಚಂದ್ರ ಹಾಗೂ ಕು.ಕಾವ್ಯ ಗಣೇಶ್ ಆಚಾರ್ಯ ಜೊತೆಯಲ್ಲಿಹಾಡಿದ ಮಲಗು ಮಲಗು ಚಾರುಲತೆ, ಸಿಂಗಾರ ಸಿರಿಯೇ, ಕೋಡಗನ ಕೋಳಿ ನುಂಗಿತ್ತಾ ಹಾಡುಗಳು ಪ್ರೇಕ್ಷಕರ ಮನಗೆದ್ದವು.
ಭಾಗವಹಿಸಿದ ಎಲ್ಲ ಕಲಾವಿದರಿಗೂ ಸುಬ್ರಾಯ ಚೊಕ್ಕಾಡಿಯವರು ಪ್ರಮಾಣಪತ್ರ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನಹೊಂದಿದ, ಗಣೇಶ್ ಮ್ಯೂಸಿಕಲ್ಸ್ ನ ಸಂಗೀತ ವಿದ್ಯಾರ್ಥಿ ಬಾಲ ಕಲಾವಿದೆ ಸಿರಿ ಆಚಾರ್ಯ ಳಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶಿಬಿರಾರ್ಥಿಗಳ ಪರವಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಮತಾ ರವೀಶ್ ಹಾಗೂ ಗಾಯಕಿ ಕು. ಅನುಜ್ಞಾ ಅನಿಸಿಕೆ ಹೇಳಿದರು.
ಗಣೇಶ್ ಮ್ಯೂಸಿಕಲ್ಸ್ ನ ಸಂಚಾಲಕರಾದ ಗಣೇಶ್ ಬಿ.ಎಸ್.ವರು ಕಾರ್ಯಕ್ರಮ ನಿರೂಪಿಸಿ
ಎಲ್ಲರನ್ನೂ ವಂದಿಸಿದರು.
” ಸಂಗೀತಕ್ಕೆ ಅರ್ಪಿಸಿಕೊಂಡ ಶ್ರೇಷ್ಠ ಗಾಯಕ ನಮ್ಮ ರಮೇಶ್ಚಂದ್ರ :
ಸುಗಮ ಸಂಗೀತ ಕಾರ್ಯಾಗಾರ ಉದ್ಘಾಟಿಸಿ ಡಾ||ಜೀವನ್ ರಾಂ ಸುಳ್ಯ
ಸುಗಮ ಸಂಗೀತ ಕ್ಷೇತ್ರದಲ್ಲಿ ಇಂದು ಸಾವಿರಾರು ಗಾಯಕರು ತಮ್ಮ ಬದುಕು ಕಟ್ಟಿಕೊಂಡವರಿದ್ದಾರೆ. ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ ಇವರು ಸುಗಮ ಸಂಗೀತ ಕ್ಷೇತ್ರದ ತ್ರಿಮೂರ್ತಿಗಳು. ಸಂಗೀತಕ್ಕೆಂದೇ ತಮ್ಮನ್ನು ತಾವು ಪೂರ್ತಿ ಅರ್ಪಿಸಿಕೊಂಡ ಗಾಯಕರಲ್ಲಿ ರಮೇಶ್ಚಂದ್ರ ರು ಶ್ರೇಷ್ಠರು. ಈ ಕಾರ್ಯಗಾರ ರಂಗಮನೆಯಲ್ಲಿ ನಡೀತಿರೋದು ನನಗಂತೂ ಬಹಳ ಖುಷಿ ನೀಡಿದೆ’ ಎಂದುಕಾರ್ಯಾಗಾರ ಉದ್ಘಾಟಿಸಿದ ರಂಗಮನೆಯ ರೂವಾರಿ ಡಾ||ಜೀವನ್ ರಾಂ ಸುಳ್ಯ ಹೇಳಿದರು.