ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಎಡಮಂಗಲ ನಿವಾಸಿಗಳಿಗೆ ಪಂಚಾಯತ್ ರೂ 2000.00 ದಂಡ ವಿಧಿಸಿದೆ. ಡಿ.16 ರಂದು ಬೇಂಗಮಲೆ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀ ಶ್ಯಾಮ್ ಪ್ರಸಾದ್ ಎಂ ಆರ್ ರವರು ಬೇಂಗಮಲೆ ಪರಿಸರಕ್ಕೆ ಭೇಟಿ ನೀಡಿ ಸಿ ಸಿ ಕ್ಯಾಮರ ದೃಶ್ಯ ಪರಿಶೀಲಿಸಿ ಹಾಗೂ ಅಲ್ಲಿ ತ್ಯಾಜ್ಯ ಎಸೆದ ಬ್ಯಾಗ್ ಗಳನ್ನು ಪರಿಶೀಲಿಸಿ,ಬೆಳ್ಳಾರೆ ಆರಕ್ಷಕ ಠಾಣಾಧಿಕಾರಿಗಳ ಸಹಕಾರದೊಂದಿಗೆ ತ್ಯಾಜ್ಯ ಬೀಸಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ರೂ 2000.00 ದಂಡ ವಿಧಿಸಿ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಿದ್ದಾರೆ.
ಪಂಚಾಯತ್ ನ ಈ ಕಠಿಣ ಕ್ರಮದಿಂದಾಗಿ ಐವರ್ನಾಡಿನ ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅರಿವು ಮೂಡಿದೆ. ಆದರೇ ಈಗ ಕಸ ಎಸೆಯುತ್ತಿರುವುದು ಬೇರೆ ಊರಿನ ಪ್ರಜೆಗಳು. ಈ ಬಗ್ಗೆ ತಾಲೂಕಿನ ಪ್ರತಿಯೊಬ್ಬರಿಗೂ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ತಾಲೂಕು ಆಡಳಿತ ಪ್ರಯತ್ನಿಸಬೇಕು. ಇದೇ ಮಾದರಿಯನ್ನು ಪ್ರತಿ ಗ್ರಾಮ ಪಂಚಾಯತ್ ಗಳು ಅನುಷ್ಠಾನಕ್ಕೆ ತಂದು, ತಾಲೂಕಿನ ಎಲ್ಲರಿಗೆ ಅರಿವು ಮೂಡಿಸಿದಾಗ ಮಾತ್ರ ಸುಳ್ಯವನ್ನು ಸ್ವಚ್ಚ ತಾಲೂಕು ಆಗಿ ಕಾಣಬಹುದು.