ಸುಳ್ಯ: ಚುಟುಕು ಸಾಹಿತ್ಯ ಪರಿಷತ್ತು ಸುಳ್ಯ ಇದರ ನೂತನ ಘಟಕಕ್ಕೆ ಚಾಲನೆ, ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ ಹಾಗೂ ಮಕ್ಕಳ ಸಾಹಿತ್ಯಗೋಷ್ಠಿಯು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಚು.ಸಾ.ಪ ಇದರ ದ.ಕ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಇವರ ನಿರ್ದೇಶನದಂತೆ ಸುಳ್ಯ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಜಿ ಕಾವೇರಮ್ಮ, ನೂತನ ಅಧ್ಯಕ್ಷರಾಗಿ ಅಶ್ವಿನಿ ಕೋಡಿಬೈಲು, ಕಾರ್ಯದರ್ಶಿಯಾಗಿ ಉದಯಭಾಸ್ಕರ್ ಸುಳ್ಯ, ಜತೆ ಕಾರ್ಯದರ್ಶಿಗಳಾಗಿ ಅನುರಾಧಾ ಉಬರಡ್ಕ ಮತ್ತು ವನಿತಾ ಸುಂದರ್ ಸುಳ್ಯ ಹಾಗೂ ಕೋಶಾಧಿಕಾರಿಯಾಗಿ ನಿತಿನ್ ಎಂ.ಜಿ ಆಯ್ಕೆಯಾದರು.
ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ತುಳಸಿ.ಕೆ ದೀಪ ಪ್ರಜ್ವಲಿಸಿ ಘಟಕಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಪರಿಷತ್ತಿನ ಪದಾಧಿಕಾರಿಗಳು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಸರಳ ಮತ್ತು ವಿಭಿನ್ನವಾಗಿ ಪದಗ್ರಹಣ ಮಾಡಿದರು. ಪರಿಷತ್ತಿನ ಮೊದಲ ಚಟುವಟಿಕೆಯಾಗಿ ನಡೆದ ಮಕ್ಕಳ ಸಾಹಿತ್ಯಗೋಷ್ಠಿಯಲ್ಲಿ 10 ವಿದ್ಯಾರ್ಥಿಗಳು ಸ್ವರಚಿತ ಚುಟುಕು, ಕಥೆ, ಕವನ ವಾಚಿಸಿ ಘಟಕದ ವತಿಯಿಂದ ಪ್ರಶಂಸನಾ ಪತ್ರ ಪಡೆದುಕೊಂಡರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿ ಅಶ್ವಿನಿ ಕೋಡಿಬೈಲು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದಯಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳುವ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲಾ ವಿದ್ಯಾರ್ಥಿನಿ ಶಹಲಾ ಗೋಷ್ಠಿಯನ್ನು ನಿರ್ವಹಿಸಿ ಅನುರಾಧ ಉಬರಡ್ಕ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಶಾಲಾ ದೈಹಿಕ ಶಿಕ್ಷಕರಾದ ರಘುನಾಥ ಯು, ಪ್ರೇರಣಾ ತಂಡದ ಜಿಲ್ಲಾ ನೋಡಲ್ ಅಧಿಕಾರಿ ಲವೀಶ್ ಹಾಗೂ ಶಾಲಾ ನಾಯಕಿ ನಿಶಾ ಉಪಸ್ಥಿತರಿದ್ದರು.