ಹಲವು ಬಾರಿ ಇಲಾಖೆಗಳಿಗೆ ಮನವಿ ಮಾಡಿದರು ಬಡ ದಲಿತರ ಯಾವುದೇ ಕೆಲಸ ಕಾನೂನು ಬದ್ಧವಾಗಿ ಆಗುತ್ತಿಲ್ಲ. ಎಲ್ಲಾ ಕಡೆಯಲ್ಲೂ ದಲಿತರಿಗೆ ಒಂದು ಕಾನೂನು ಮೇಲ್ವರ್ಗದವರಿಗೆ ಒಂದು ಕಾನೂನು ಎನ್ನುವ ರೀತಿಯಲ್ಲಿ ಸರಕಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಡಿ.19 ರಂದು ಬೇಡಿಕೆ ಈಡೇರಿಕೆಗಾಗಿ ಮನವಿಗೆ ಸ್ಪಂದನೆ ನೀಡದ ಇಲಾಖೆಗಳ ವಿರುದ್ಧ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಅಧ್ಯಕ್ಷ ಸುಂದರ್ ಪಾಟಾಜೆ ಹೇಳಿದ್ದಾರೆ. ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಒಟ್ಟು 700 ಎಕ್ರೆ ಡಿಸಿ ಮನ್ನಾ ಜಾಗ ಇದೆ ಅದರಲ್ಲಿ 300 ಎಕ್ರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಕ್ಕಿರುತ್ತದೆ. ಉಳಿದ ಜಾಗವನ್ನೆಲ್ಲಾ ಮೇಲ್ವರ್ಗದವರು ರೆಕಾರ್ಡ್ ಮಾಡಿ ಕೊಂಡಿದ್ದಾರೆ. ಇದನ್ನು ಸರ್ವೇ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಬೇಕು. ಸುಳ್ಯ ಕಸಬ ಗ್ರಾಮದಲ್ಲಿ ಡಿಸಿ ಮನ್ನಾ ಜಾಗ 40 ಎಕ್ರೆ ಇದೆ ಬಂಗ್ಲೆಗುಡ್ಡೆ ಡಿಸಿ ಮನ್ನಾ ಜಾಗದಲ್ಲಿ ಜೇನು ಸೊಸೈಟಿ
ಬಿಲ್ಡಿಂಗ್ ಮತ್ತು ನಗರ ಪಂಚಾಯತ್ ನವರು ವಿಶ್ರಾಂತಿಧಾಮ ನಿರ್ಮಿಸಿದ್ದಾರೆ ಮತ್ತು ಗಾಂಧಿನಗರದಲ್ಲಿ ಡಿಸಿ ಮನ್ನಾ ಜಾಗದಲ್ಲಿ 13 ಮೇಲ್ವರ್ಗದ ಕುಟುಂಬದವರಿಗೆ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಕೂಡಲೇ ಅವುಗಳನ್ನು ರದ್ದು ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು. ದಲಿತರಾದ ದಾಸಪ್ಪ ಎಂಬವರು ಮೇನಾಲದಲ್ಲಿ ಸುಮಾರು 40 ವರ್ಷಗಳಿಂದ ವಾಸವಾಗಿದ್ದಾರೆ. ಹಲವು ವರ್ಷಗಳಿಂದ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದರೂ ಇದುವರೆಗೂ ರೆಕಾರ್ಡ್ ಮಾಡಿ ಕೊಟ್ಟಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಸ್ಪಂದಿಸುವಂತೆ ಮನವಿ ಮಾಡಿದರು. ಮಿತ್ತೂರು ಉಬರಡ್ಕ ಗ್ರಾಮದ ಕೊಡಿಯಾಲಬೈಲು ದಲಿತ ಕಾಲೊನಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದ 30 ಲಕ್ಷ ವೆಚ್ಚದ ಶೌಚಾಲಯ ಮತ್ತು ಸ್ನಾನ ಘಟಕದ ಕಟ್ಟಡವನ್ನು ಸ್ಥಳ ಬದಲಾವಣೆ ಮಾಡಿ ಹಿಂದೂ ರುದ್ರಭೂಮಿ ಒಳಗೆ ನಿರ್ಮಿಸಿದ್ದಾರೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ.
ಮಿತ್ತೂರು ಉಬರಡ್ಕ ಗ್ರಾಮದ ಅಮೈ ಪಾಲಡ್ಕ ಎಂಬಲ್ಲಿ, ಅರಂತೋಡು ಗ್ರಾಮದ ನೆಕ್ಕರೆಮಲೆ ಸಂಪರ್ಕ ರಸ್ತೆಗೆ ಕಾಂಕ್ರೀಟೀಕರಣ ಮತ್ತು ಸೇತುವೆ ಹಾಗೂ ಅರಂತೋಡು ಗ್ರಾಮದ ಅರಮನೆ ಗಯ ಎಂಬಲ್ಲಿ 30 ವರ್ಷಗಳಿಂದ ಸೇತುವೆ ನಿರ್ಮಿಸಿ ಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಿತ್ತೂರು ಉಬರಡ್ಕ ಗ್ರಾಮದ ಯಾವಟೆ ಕಟ್ಟಕೋಡಿ ಸಂಪರ್ಕ ರಸ್ತೆಗೆ ಕಾಂಕ್ರೀಟೀಕರಣ ಮತ್ತು ಮಂಜಿಕಾನ ಬದನಕಜೆ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಮತ್ತು ಸೇತುವೆಯ ಬೇಡಿಕೆ ಈಡೇರಿಸಿಲ್ಲ. ಡಾ| ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸಬೇಕೆಂಬ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸಿಲ್ಲ.
ಈ ಎಲ್ಲಾ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಡಿ.19 ರಂದು ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಿದ್ದೇವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಬಾಲಕೃಷ್ಣ,ನವೀನ್ ಅರಮನೆಗಯ, ಪರಮೇಶ್ವರ ಕೆಮ್ಮಿಂಜೆ, ತೇಜಕುಮಾರ್, ದಾಸಪ್ಪ, ರಮೇಶ್ ಕೊಡಂಕೇರಿ, ರಾಮಕೃಷ್ಣ ಮತ್ತಿತರರಿದ್ದರು.
- Friday
- November 1st, 2024