
ಸುಬ್ರಹ್ಮಣ್ಯ ಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೋರ್ವನಿಗೆ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಯುವಕನನ್ನು ಪೋಲಿಸ್ ವಸತಿ ಗೃಹಕ್ಕೆ ಕರೆದೊಯ್ದು ಹಲ್ಲೆ ಮಾಡಿರುವ ಘಟನೆ ಬಗ್ಗೆ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ, ಪೊಲೀಸ್ ಇಲಾಖೆಯ ಬಗ್ಗೆ ನಂಬಿಕೆ ಇದ್ದು ದೌರ್ಜನ್ಯವೆಸಗಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಮಿತಿ ಸದಸ್ಯ ಚಿನ್ಮಯ್ ಈಶ್ವರಮಂಗಲ ಆಗ್ರಹಿಸಿದ್ದಾರೆ.
ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿರುವ ಕುಟ್ರುಪಾಡಿ ಗ್ರಾಮದ ಬೀಮಗುಂಡಿ ನಿವಾಸಿ ಶಶಿಕಿರಣ್ ಅವರನ್ನು ಭೇಟಿಯಾಗಿ ಬಳಿಕ ಮಾದ್ಯಮದ ಜೊತೆ ಮಾತನಾಡಿದರು. ಪೊಲೀಸ್ ಇಲಾಖೆ ನಾವು ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಯುವಕ ಆಸ್ಪತ್ರೆಗೆ ದಾಖಲಾಗಿ ದಿನ ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ.ಯಾವುದೇ ಕ್ರಮ ಜರುಗಿಸದೆ ಇದ್ದಲ್ಲಿ ಸುಳ್ಯ,ಪುತ್ತೂರು,ಕಡಬ ಭಾಗದ ಹಿಂದೂ ಕಾರ್ಯಕರ್ತರನ್ನು ಸೇರಿಸಿ ಸುಬ್ರಹ್ಮಣ್ಯ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಜಿಲ್ಲಾ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ, ಜಿಲ್ಲಾ ಸಮಿತಿ ಸದಸ್ಯರಾದ ಅವಿನಾಶ್ ಪುರುಷರಕಟ್ಟೆ, ಸುಳ್ಯ ತಾಲೂಕು ಸಂಚಾಲಕ ಮಹೇಶ್ ಉಗ್ರಾಣಿಮನೆ,ಸಹ ಸಂಚಾಲಕ ನಿಕೇಶ್ ಉಬರಡ್ಕ, ಜೀವನ್ ಸುಳ್ಯ,ಕಡಬ ತಾಲೂಕು ಸಮಿತಿಯ ಮಲ್ಲೇಶ್ ಆಲಂಕಾರು,ಜಿನಿತ್ ಮರ್ದಾಳ ಮುಂತಾದವರು ಉಪಸ್ಥಿತರಿದ್ದರು.