ಸುಬ್ರಹ್ಮಣ್ಯದಲ್ಲಿ ವ್ಯಾಪಾರ ಮಾಡುತ್ತಿದ್ದ ಸಂದರ್ಭ ಪೋಲೀಸರೊಬ್ಬರು ಹಣಕ್ಕಾಗಿ ಬೇಡಿಕೆ ಇಟ್ಟು ಹಲ್ಲೆ ನಡೆಸಿದ್ದಾರೆಂದು ಕಡಬದ ಯುವಕನೋರ್ವ ಆಸ್ಪತ್ರೆಯಲ್ಲಿ ದಾಖಲಾಗಿ ಪೋಲೀಸ್ ದೂರು ನೀಡಿದ ಘಟನೆ ಡಿ.1 ರಂದು ನಡೆದಿದೆ.
ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಪೋಲಿಸ್ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಕುಟ್ರುಪ್ಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕುಮಾರ್ ಕಡಬ ಸಮುದಾಯ ಆಸ್ಪತ್ರೆಯಲ್ಲಿ ನ.30 ರಂದು ಚಿಕಿತ್ಸೆ ಪಡೆದು ದೂರು ನೀಡಿದ್ದಾರೆ.
ವಿಷಯ ತಿಳಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಜಮಾಯಿಸಿದ್ದು ಪೋಲಿಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಯುವಕನಿಗೆ ನ್ಯಾಯ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಶಶಿಕಿರಣ್ ಅವರು ಚಂಪಾಷಷ್ಠಿಯಂದು ನಾನು ಜ್ಯೂಸ್ ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದು, ಪಂಚಮಿಯ ರಾತ್ರಿ 12 ಗಂಟೆ ಸುಮಾರಿಗೆ ಸ್ಟಾಲಿಗೆ ಬಂದ ಪೋಲಿಸ್ ಸಿಬ್ಬಂದಿ ಬೀಮಣ್ಣ ಗೌಡ ಎಂಬವರು ಹಣ ನೀಡುವಂತೆ ಒತ್ತಾಯಿಸಿದ್ದು ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗೆ ನಾನು ಹೆದರಿ 1000 ನೀಡಿದ್ದೇನೆ. ಈ ಹಣ ಸಾಕಾಗುವುದಿಲ್ಲ. 5000 ನೀಡುವಂತೆ ಪೋಲಿಸ್ ಸಿಬ್ಬಂದಿ ಬೆದರಿಸಿದ್ದು ಅಷ್ಟು ಹಣ ನೀಡದಿದ್ದಾಗ ನನ್ನನ್ನು ಠಾಣೆಯ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಆರೋಪಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಭೀಮನ ಗೌಡ ಅವರನ್ನು ಸಂಪರ್ಕಿಸಿದಾಗ ನಾನು ಶಶಿಕಿರಣ್ ಬಳಿ ಹಣ ಕೇಳಿಲ್ಲ. ಸ್ಥಳ ಬಾಡಿಗೆದಾರರಿಗೆ ಬಾಡಿಗೆ ನೀಡದನ್ನು ಕೇಳಲು ಹೋದಾಗ ಹತ್ತಿರದಲ್ಲೇ ಇದ್ದರೂ ನಾನು ಸುಳ್ಯದಲ್ಲಿ ಇದ್ದೇನೆ ಎಂದು ಸುಳ್ಳು ಹೇಳುತ್ತಿದ್ದ. ಬಾಡಿಗೆ ಕೊಡದೇ ಸತಾಯಿಸುತ್ತಿದ್ದ. ಜ್ಯೂಸ್ ಅಂಗಡಿ ಎಂದು ಕಲರ್ ಚಾಯಿಸ್ ಎಂಬ ಗ್ಯಾಂಬ್ಲಿಂಗ್ ಮಾದರಿ ಆಟ ಮಾಡಿ ವ್ಯಾಪಾರ ಮಾಡುತಿದ್ದರು. ಇದಕ್ಕೆ ಬುದ್ಧಿವಾದ ಹೇಳಿದ್ದೆ ಅಷ್ಟೆ. ಅಂಗಡಿಯ ಕೆಲಸದ ಹುಡುಗರ ಕೈಗೆ ನಾನೇ 200 ರೂ ಕೊಟ್ಟಿದ್ದೆ. ಅವರ ಆರೋಪ ಸುಳ್ಳು ಎಂದು ಅಮರ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ಕಡಬ ತಾಲೂಕು ಸಂಚಾಲಕ ಜಿನಿತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಪೋಲೀಸರು ಇನ್ನೂ ಎಫ್.ಐ.ಆರ್. ದಾಖಲು ಮಾಡಿಲ್ಲ, ಈಗ ಪೋಲೀಸರು ಗ್ಯಾಂಬ್ಲಿಂಗ್ ಕೇಸು ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ, ಕಲರ್ ಚಾಯಿಸ್ ಮಾಡುವ ಹಲವಾರು ಅಂಗಡಿ ಅಲ್ಲಿ ಇತ್ತು. ಈ ಬಗ್ಗೆ ಸಂಘಟನೆಯ ವತಿಯಿಂದ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಸ್ಥಳ ಬಾಡಿಗೆ ಹಣ 2100 ರೂ ಗಳನ್ನು ನೀಡದೇ ವಂಚಿಸಲು ಯತ್ನಿಸಿದ್ದರಿಂದಲೇ ಇಷ್ಟೆಲ್ಲಾ ಘಟನೆಗಳಿಗೆ ಕಾರಣವಾಗಿದೆ. ಪೋಲೀಸರು ನನ್ನ ಎದುರೇ ಅಂಗಡಿಯ ಸಿಬ್ಬಂದಿಗೆ ಊಟಕ್ಕಾಗಿ ರೂ.200 ಹಣ ನೀಡಿದ್ದಾರೆ ಹೊರತು ಅಂಗಡಿಯ ಎದುರು ಅವರ ಬಳಿ 5000 ಕೇಳಿಲ್ಲ. ಗ್ಯಾಂಬ್ಲಿಂಗ್ ಆಟದಿಂದಾಗಿ 3000 ಹಣ ಕಳೆದುಕೊಂಡ ಕಿಶೋರ್ ಮತ್ತು ಆತನ ಮಧ್ಯೆ ಚರ್ಚೆ ಆಗುತ್ತಿರುವುದನ್ನು ನೋಡಿ ಅಲ್ಲಿಗೆ ಪೋಲೀಸ್ ಜತೆ ಕೂಡ ಏಕವಚನದಿಂದ ಮಾತನಾಡಿದ್ದಾನೆ. ಹಾಗೂ ಈ ಗ್ಯಾಂಬ್ಲಿಂಗ್ ಆಟದ ಬಗ್ಗೆ ಪೋಲೀಸ್ ಪ್ರಶ್ನಿಸಿದಕ್ಕಾಗಿ ಈ ರೀತಿಯ ಸುಳ್ಳು ಕೇಸು ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ದೀಪಕ್ ಅಮರ ಸುದ್ದಿಗೆ ತಿಳಿಸಿದ್ದಾರೆ.
ಬಾಡಿಗೆ ಹಣ ನೀಡದೇ ವಂಚಿಸಿಲ್ಲ, ಅವರು ಕೇಳಿದಷ್ಟೇ ಹಣ ನೀಡಿದ್ದೇನೆ. ಇವರು ಗ್ಯಾಂಬ್ಲಿಂಗ್ ವ್ಯಾಪಾರ ಮಾಡುತ್ತಿದ್ದಾರೆ ಹಣ ವಸೂಲಿ ಮಾಡಲು ಇದು ಒಳ್ಳೆಯ ಅವಕಾಶ ಎಂದು ದುರುದ್ದೇಶ ಇಟ್ಟುಕೊಂಡು ಹಲ್ಲೆ ನಡೆಸಿದ್ದಾರೆ. ಕಾಲರ್ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿ ಬೂಟಿನಿಂದ ಸೊಂಟ ಹಾಗೂ ಕಾಲಿಗೆ ಮೆಟ್ಟಿದ್ದಾರೆ. ಜೂಸ್ ಬಾಟಲಿ ಹೊತ್ತು ನಿಲ್ಲಿಸಿದ್ದಾರೆ. ಹಣ ಸಿಗುವುದಿಲ್ಲ ಎಂದು ಗ್ಯಾಂಬ್ಲಿಂಗ್ ಕೇಸ್ ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ಶಶಿಕಿರಣ್ ಹೇಳಿಕೆ ನೀಡಿದ್ದಾರೆ.