Ad Widget

ನ.30 ರಂದು ಸುಳ್ಯ ಪ್ರೆಸ್ ಕ್ಲಬ್ ನೂತನ ಕಟ್ಟಡ ಉದ್ಘಾಟನೆ

. . . . . . .

ಪ್ರೆಸ್ ಕ್ಲಬ್ ಸುಳ್ಯದ ವತಿಯಿಂದ ಸುಳ್ಯದ ಅಂಬಟಡ್ಕದಲ್ಲಿ ನಿರ್ಮಾಣಗೊಂಡ ‘ಪತ್ರಕರ್ತರ ಸಮುದಾಯ ಭವನ’ದ ನೆಲ ಅಂತಸ್ತಿನ ಉದ್ಘಾಟನೆ ನ.30 ರಂದು ನಡೆಯಲಿದೆ ಎಂದು ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಹೇಳಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ಪ್ರೆಸ್ ಕ್ಲಬ್‌ಗೆ ತಾಲೂಕು ಪಂಚಾಯತ್ ನೀಡಿದ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ರೂ. 1.25 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು. ದಾನಿಗಳ ನೆರವಿನಿಂದ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನೆಲ ಅಂತಸ್ತಿನ ಕಾಮಗಾರಿ ಪೂರ್ತಿಗೊಂಡಿದೆ.
ಶಿಕ್ಷಣ, ಸಾಹಿತ್ಯ,ಸಾಂಸ್ಕೃತಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿರುವ ಸುಳ್ಯ ತಾಲೂಕಿನಲ್ಲಿ ಪತ್ರಿಕಾ ಕ್ಷೇತ್ರವೂ ಸಾಕಷ್ಟು ಕ್ರಿಯಾಶೀಲವಾಗಿದೆ. ಹಲವು ಸ್ಥಳೀಯ ಪತ್ರಿಕೆಗಳ ಮೂಲಕ ಗ್ರಾಮೀಣ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿರುವ ಸುಳ್ಯದಿಂದ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಪತ್ರಕರ್ತರಾಗಿ ಹಲವು ಮಂದಿ ಹೆಸರು ಗಳಿಸಿದ್ದಾರೆ. ವಿವಿಧ ಭಾಷೆಗಳ ರಾಜ್ಯ ಹಾಗು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುಳ್ಯದ ಸುಮಾರು 50ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಸಂಪಾದಕರಿಂದ ಹಿಡಿದು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಳ್ಯದಲ್ಲಿಯೂ ಸ್ಥಳೀಯ ಪತ್ರಕರ್ತರಲ್ಲದೆ ಎಲ್ಲಾ ರಾಜ್ಯ ಮಟ್ಟದ ಮಾಧ್ಯಮಗಳಿಗೂ ವರದಿಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದುದರಿಂದಲೇ ಇಲ್ಲಿ ಪತ್ರಕರ್ತರ ಸಂಘಗಳು ಕೂಡ ಸಕ್ರಿಯವಾಗಿದೆ. ಕಳೆದ ಮೂರು ದಶಕಗಳಿಂದ ಪತ್ರಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ಗಳು ಇಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಸುಳ್ಯಕ್ಕೊಂದು ಸುಸಜ್ಜಿತ ಪತ್ರಿಕಾ ಭವನ ನಿರ್ಮಿಸಬೇಕು ಎಂಬುದು ಇಲ್ಲಿನ ಪತ್ರಕರ್ತರ ಪ್ರಮುಖ ಕನಸಾಗಿತ್ತು. ಈ ನಿಟ್ಟಿನಲ್ಲಿ ಕಳೆದ ಒಂದು ದಶಕದಿಂದ ಪತ್ರಿಕಾ ಭವನಕ್ಕಾಗಿ ಪ್ರಯತ್ನ ನಡೆಸುತ್ತಾ ಬಂದಿದೆ. ಇದೀಗ ಸುಳ್ಯದ ಎಲ್ಲಾ ಪತ್ರಕರ್ತರು ಒಟ್ಟಾಗಿ ‘ಪ್ರೆಸ್ ಕ್ಲಬ್’ ರಚಿಸಿ ದಾನಿಗಳ ಸಹಕಾರದಿಂದ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ ಸರಕಾರದ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದ್ದರೂ ಕೆಲವೊಂದು ತಾಂತ್ರಿಕ ಅಡೆ ತಡೆಗಳಿಂದ ಸರಕಾರದ ಅನುದಾನ ದೊರಕಿಲ್ಲ‌. ಪತ್ರಕರ್ತರೇ ಸೇರಿ ದಾನಿಗಳ ನೆರವಿನಿಂದ ಪ್ರಥಮ ನೆಲ ಅಂತಸ್ತಿನ ಕಾಮಗಾರಿ ನಡೆಸಲಾಗಿದೆ. ಮುಂದಿನ ಹಂತದ ಕಾಮಗಾರಿಗೆ ಸರಕಾರದಿಂದ‌ ಅನುದಾನ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಸರಕಾರದ ಅನುದಾನ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಜನಪ್ರತಿನಿಧಿಗಳ ಹಾಗೂ ಪತ್ರಕರ್ತರ ಸಂಘಟನೆಗಳ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

ನ.30 ರಂದು ಉದ್ಘಾಟನೆ: ಪತ್ರಕರ್ತರ ಸಮುದಾಯ ಭವನದ ನೆಲ ಅಂತಸ್ತಿನ ಕಾಮಗಾರಿ ಪೂರ್ಣ ಗೊಂಡಿದ್ದು , ಅದರ ಉದ್ಘಾಟನಾ ಕಾರ್ಯಕ್ರಮ . ನ.30 ರಂದು ಪೂ.10 ಗಂಟೆಗೆ ನಡೆಯಲಿದೆ. ಸುಳ್ಯದ ಶಾಸಕ ಹಾಗೂ ರಾಜ್ಯದ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಭವನವನ್ನು ಉದ್ಘಾಟಿಸುವರು .
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಂಧನ ಹಾಗು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಹಾಗು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ , ಸಂಸದ ನಳಿನ್ ಕುಮಾರ್ ಕಟೀಲ್ , ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದ ಗೌಡ , ಎಂ.ಎಲ್.ಸಿ. ಹರೀಶ್ ಕುಮಾರ್ ವಿವಿಧ ವಿಭಾಗಗಳ ಉದ್ಘಾಟನೆಯನ್ನು ನೆರವೇರಿಸುವರು . ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಹಾಗೂ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನಗೈಯ್ಯುವರು. ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕರಾದ ಡಾ. ಯು.ಪಿ.ಶಿವಾನಂದರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು . ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌
ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ., ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ. ನಾಯರ್ , ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ , ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ . , ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ , ಮಾಜಿ ಸಚಿವ ಬಿ.ರಮಾನಾಥ ರೈ , ಸುಳ್ಯ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ , ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ , ತಾ.ಪಂ. ಆಡಳಿತಾಧಿಕಾರಿ ಅಭಿಷೇಕ್ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು , ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷ ನಾರಾಯಣ ಬಿ. , ರೆ .ಫಾ.ವಿಕ್ಟರ್‌ ಡಿಸೋಜ , ಸೈಯ್ಯದ ಕುಂಞಿಕೋಯ ತಂಙಳ್, ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ದ.ಕ.ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಹೆಚ್‌.ಜಿ, ಪಿ.ಬಿ.ಹರೀಶ್ ರೈ, ಬಾಳ ಜಗನ್ನಾಥ ಶೆಟ್ಟಿ, ತಾರನಾಥ ಗಟ್ಟಿ ಕಾಪಿಕಾಡ್ ಮುಖ್ಯ ಅತಿಥಿಗಳಾಗಿರುವರು. ತಾಲೂಕಿನ ಜನಪ್ರತಿನಿಧಿಗಳು, ಪ್ರಮುಖ ಅಧಿಕಾರಿಗಳು, ದಾನಿಗಳು , ಸಹಕರಿಸಿದವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪೂ.9.30 ರಿಂದ ವಿದುಷಿ ವಿಭಾ ಶ್ರೀನಿವಾಸ ನಾಯಕ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಅಪರಾಹ್ನ 1 ರಿಂದ ಖ್ಯಾತ ಗಾಯಕ ಶಶಿಧರ ಕೋಟೆ ಬಳಗದವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಎಲ್ಲಾ ಪತ್ರಕರ್ತರು, ತಾಲೂಕಿನ ಎಲ್ಲಾ ಪಂಚಾಯತ್ ಸದಸ್ಯರು ಸಹಕಾರಿ ಸಂಘಗಳ ನಿರ್ದೇಶಕರು, ಸಾರ್ವಜನಿಕರು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸುಳ್ಯ ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ , ಖಜಾಂಚಿ ಯಶ್ಚಿತ್ ಕಾಳಮ್ಮನೆ ನಿರ್ದೇಶಕರಾದ ಜೆ.ಕೆ.ರೈ, ಜಯಪ್ರಕಾಶ್ ಕುಕ್ಕೆಟ್ಟಿ, ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!