ಏಕಾಗ್ರತೆ ಮತ್ತು ಶಿಸ್ತಿನ ಅನುಸರಣೆಯಿಂದ ಕ್ರೀಡಾಕ್ಷೇತ್ರದಲ್ಲಿ ಅಭ್ಯುದಯವಾಗಲು ಸಾಧ್ಯವಿದೆಸಾಧನೆಗೆ ಸ್ಥಿರವಾದ ಮನಸ್ಸು, ಏಕಾಗ್ರತೆ, ಸದೃಢ ದೇಹ ಅತ್ಯಗತ್ಯ. ಉತ್ತಮ ಆಹಾರ, ಉತ್ತಮ ನಡವಳಿಕೆ, ಉತ್ತಮ ಮನಸು ಎಂಬ ತ್ರಿವಳಿಗಳು ಜೀವನದಲ್ಲಿ ಸಾಧನೆಗೆ ಪೂರಕವಾಗಿದೆ. ಶ್ರಮ, ನಿಷ್ಠೆ, ಪರಿಶ್ರಮ, ಕ್ರೀಡೆಯಲ್ಲಿ ಆಸಕ್ತಿ ಬೇಕು. ಕ್ರೀಡೆಯಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ಪ್ರಾಪ್ತಿಯಾಗುತ್ತದೆ. ಶಿಸ್ತು ಮತ್ತು ಕ್ರೀಡಾಸ್ಪೂರ್ತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸೆ.8 ರಂದು ನಡೆದ ಕಡಬ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್ಲು ಕ್ರೀಡಾಂಗಣ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್ ವಹಿಸಿದ್ದರು. ಕೊಣಾಲು ಕಾಲೇಜಿನ ಪ್ರಾಂಶುಪಾಲ ದಿನೇಶ್, ಎಸ್ ಎಸ್ ಪಿ ಯು ಕಾಲೇಜಿನ ಉಪಪ್ರಾಂಶುಪಾಲೆ ಜಯಶ್ರೀ ವಿ.ದಂಬೆಕೋಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಯಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ತಾಲೂಕಿನ ವಿವಿಧ ಕಾಲೇಜುಗಳ ಕ್ರೀಡಾಳುಗಳು, ದೈಹಿಕ ಶಿಕ್ಷಣ ಉಪನ್ಯಾಸಕರು, ತೀರ್ಪುಗಾರರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.