ನೆನಪಿನಂಗಳದಿ ತುಂಬಿದೆ ನೂರಾರು ನೆನಪುಗಳ ಸಾಲು…
ಬದುಕಿನ ಈ ಪಯಣದಲ್ಲಿ ತುಂಬಿದೆ ನೂರಾರು ಹೆಜ್ಜೆಗಳ ಸಾಲು…
ಸಾಲು ಸಾಲು ಸೋಲುಗಳ ದಾಟಿ ಗೆಲುವಿನ ನಗೆ ಬೀರಲು ಕಾತರಿಸುವ ಈ ಬದುಕು ಗೆಲುವಿನ ಹಾದಿಯಲ್ಲಿ ಕಂಡಿಹುದು ನೂರಾರು ನೋವು ನಲಿವುಗಳ ಸಾಲು…
ಸೋಲು ಗೆಲುವಿನ ಸಾಲುಗಳ ನಡುವೆ ಗೆಲುವಿನ ಆ ಮಿಂಚು ಕಣ್ಣಲ್ಲಿ ಮಿಂಚುತ್ತಿತ್ತು, ಗೆಲ್ಲುವ ಆ ಕಿಚ್ಚು ಕಣ್ಣು ಮುಚ್ಚಿದರೂ ಮನಸ್ಸನ್ನು ಬಡಿದೆಬ್ಬಿಸುತ್ತಿತ್ತು…
ಪ್ರತಿದಿನವೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದ ಈ ಬದುಕು ಸೋಲಿನಲ್ಲಿ ಜಗ್ಗದೇ ಸಾಗಿತ್ತು, ನೋವಿನಲ್ಲೂ ಬಗ್ಗದೇ ಮುನ್ನಡೆದಿತ್ತು, ಪ್ರತಿಯೊಂದು ಸವಾಲುಗಳನ್ನು ಮೆಟ್ಟಿ ಮುಂದುವರಿದಿತ್ತು…
ಸಾಗುವ ದಾರಿಯಲ್ಲಿನ ಸವಾಲುಗಳ ಬಗ್ಗೆ ಅರಿವಿರದ ಈ ಮನಕೆ ತಲುಪುವ ಗುರಿಯಲ್ಲಿನ ಕಷ್ಟಗಳ ಬಗ್ಗೆ ಸ್ಪಷ್ಟವಾಗಿ ಅರಿವಿತ್ತು, ಈ ಬದುಕು ಅರಿತು ಮುನ್ನಡೆಯುತ್ತಿತ್ತು, ಗೆಲುವ ಅರಸಿ ಮುನ್ನಡೆಯುತ್ತಿತ್ತು…
ಸೋಲಿನ ಸಾಲುಗಳ ದಾಟಿ ಗೆಲುವನ್ನು ಅರಸಿ ಮುನ್ನಡೆದ ಈ ಬದುಕು ಕೊನೆಗೂ ಸೋಲಿನ ಸಾಲನ್ನು ದಾಟಿತ್ತು, ಗೆಲುವಿನ ಗೆರೆಯನ್ನು ಮುಟ್ಟಿತ್ತು…
ನೂರು ಸೋಲಿನ ಸಾಲುಗಳ ದಾಟಿ ಗೆಲುವಿನ ಗೆರೆಯಲ್ಲಿ ಹೆಜ್ಜೆಯಿಟ್ಟ ಈ ಮನಸ್ಸಿಗೆ ಸೋಲು ಗೆಲುವಿನ ಬೆಲೆಯನ್ನು ತಿಳಿಸಿತ್ತು, ನೋವು ನಲಿವಿನ ಬೆಲೆಯನ್ನು ತಿಳಿಸಿತ್ತು, ಕಷ್ಟ ಬದುಕಿನ ಬೆಲೆಯನ್ನು ತಿಳಿಸಿತ್ತು, ಈ ಬದುಕು ಪಾಠವ ಕಲಿತು ಮುನ್ನಡೆಯುತ್ತಿತ್ತು…
✒️ಉಲ್ಲಾಸ್ ಕಜ್ಜೋಡಿ
- Saturday
- November 23rd, 2024