ಎನ್ ಎಂ ಸಿ ಯಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ 2K22 ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದಿಂದ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ 2K22 ನ್ನು ಆ. 22ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ವಿವಿಧ ಕಾಲೇಜಿನ ಬಿ ಬಿ ಎ ಮತ್ತು ಬಿ ಕಾಂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಒಂಬತ್ತು ತಂಡಗಳು ಭಾಗವಹಿಸಿ ಹಣಕಾಸು, ಮಾರುಕಟ್ಟೆ, ಮಾನವ ಸಂಪನ್ಮೂಲ ಬಳಕೆ ಮತ್ತು ಡಿಜಿಟಲ್ ಮಾರುಕಟ್ಟೆಯ ಜ್ಞಾನವನ್ನು ತಮ್ಮ ಜೀವನದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರು. ಫೆಸ್ಟ್ ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ) ನ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದರು ಮಾತನಾಡಿ, ವ್ಯವಹಾರದಲ್ಲಿ ಬುದ್ಧಿವಂತಿಕೆ ಮತ್ತು ಕೌಶಲ್ಯಗಳು ಬಹಳ ಮುಖ್ಯ. ಅದನ್ನು ಮುಂದೆ ವ್ಯವಹಾರದಲ್ಲಿ ತೊಡಗಿಕೊಳ್ಳುವ ಸಂದರ್ಭದಲ್ಲಿ ರೂಢಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಫೆಸ್ಟ್ ಗಳ ಅಗತ್ಯತೆ ಇದೆ. ಇಂತಹ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು, ಕೆಲವೊಂದು ವೈಫಲ್ಯಗಳು ಮುಂದೆ ಯಶಸ್ಸಿಗೆ ದಾರಿಯಾಗುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲ. ಎಂ ಬಿ ಸದಾಶಿವರು ಮಾತನಾಡಿ, ವ್ಯವಹಾರದಲ್ಲಿ ತೊಡಗಿಕೊಳ್ಳಲು ನಾಯಕತ್ವ ಹಾಗೂ ನಿರ್ವಹಣಾ ಕೌಶಲ್ಯ ಅತ್ಯಗತ್ಯ ಇಂತಹ ಕಾರ್ಯಕ್ರಮಗಳ ಆಯೋಜನೆಯ ಮೂಲಕ ವ್ಯಾವಹಾರಿಕ ಜ್ಞಾನದ ಅರಿವನ್ನು ಮೂಡಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ವ್ಯವಹಾರದಲ್ಲಿ ಅದನ್ನು ಅಳವಡಿಸಿಕೊಳ್ಳಲು ಇದೊಂದು ವೇದಿಕೆಯಾಗುತ್ತದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಬಾಲಚಂದ್ರ ಗೌಡ ಎಂ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಂತಲಕ್ಷ್ಮಿ, ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಶ್ಯಾಮ್ ಪ್ರಸಾದ್, ಫೆಸ್ಟ್ ನ ಸಂಚಾಲಕ ಹರಿಪ್ರಸಾದ್ ಎ ಮೊದಲಾದವರು ಉಪಸ್ಥಿತರಿದ್ದರು. ಅಂತಿಮ ಬಿಬಿಎಯ ಶ್ರೀಶ್ಯಾಮ್ ಸ್ವಾಗತಿಸಿ, ದೀಕ್ಷಾ ವಂದಿಸಿದರು. ದಿಯಾ ಮರಿಯಂ ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಖಜಾಂಚಿ ಶ್ರೀಮತಿ ಶೋಭಾ ಚಿದಾನಂದರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಿವಪ್ರಸಾದ್ ಕಣಪ್ಪಿಲ ಉಪಸ್ಥಿತರಿದ್ದರು. ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಥಮ ಸ್ಥಾನವನ್ನು ಪುತ್ತೂರಿನ ಫಿಲೋಮಿನ ಕಾಲೇಜು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಪುತ್ತೂರಿನ ವಿವೇಕಾನಂದ ಕಾಲೇಜು ತನ್ನದಾಗಿಸಿಕೊಂಡಿತು. ದ್ವಿತೀಯ ಬಿಬಿಎ ರಾಹುಲ್ ಸ್ವಾಗತಿಸಿ, ಅಂತಿಮ ಬಿಬಿಎಯ ದೀಕ್ಷಾ ವಂದಿಸಿದರು. ಶಿಯಾಬ್ ಕಾರ್ಯಕ್ರಮ ನಿರೂಪಿಸಿದರು.