ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಶುಭ ಸಮಾರಂಭದಲ್ಲಿ ಯೋಧರನ್ನು ಗೌರವಿಸುವುದು ಶ್ರೇಷ್ಟ ಮತ್ತು ಹೆಮ್ಮೆಯ ಕ್ಷಣವಾಗಿದೆ. ನಿವೃತ್ತ ಯೋಧರಿಗೆ ಗೌರವ ನೀಡುವುದು ದೇಶ ಪ್ರೇಮದ ಭಾವನೆಗಳ ಔನತ್ಯಕ್ಕೆ ಅಡಿಗಲ್ಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ವನ್ನು ಉಳಿಸಿ ಬೆಳೆಸುವತ್ತ ಆಧುನಿಕ ಯುಗದಲ್ಲಿ ಯುವ ಜನಾಂಗ ಕಟಿಬದ್ಧವಾಗಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.ಸುಬ್ರಹ್ಮಣ್ಯ ಗ್ರಾ.ಪಂ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯ ದಲ್ಲಿ ಸುಬ್ರಹ್ಮಣ್ಯ ದ ವಚನ ವಲ್ಲೀಶ ಸಭಾಭವನದಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಯೋಧರಿಗೆ ಗೌರವಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ರಕ್ಷಣಾ ಕೈಂಕರ್ಯವನ್ನು ನೆರವೇರಿಸಿ ಬಂದ ಸೈನಿಕರನ್ನು ಹಾಗೂ ದೇಶ ಸೇವೆ ಮಾಡುತ್ತಿರುವ ಯೋಧರನ್ನು ನೆನಪಿಸುವುದು ಸರ್ವರ ಆಧ್ಯ ಕರ್ತವ್ಯವಾಗಿದೆ. ಇದರೊಂದಿಗೆ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದ ಸರ್ವರೂ ಸ್ಮರಣೀಯರು ಎಂದರು. ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ವಿಶೇಷ ಭಾಷಣವನ್ನು ನಿವೃತ್ತ ಶಿಕ್ಷಕ ಚಿದಾನಂದ ಯು.ಎಸ್ ಮಾಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಎಸ್ ಎಸ್ ಪಿ ಯು ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್, ಉದ್ಯಮಿಗಳಾದ ಕೆ.ಯಜ್ಞೇಶ್ ಆಚಾರ್, ಹರೀಶ್ ಕಾಮತ್, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಏನೆಕಲ್ಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಸುಬ್ರಹ್ಮಣ್ಯದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆ.ಪಿ.ಎಂ ಚೆರಿಯನ್ ಮುಖ್ಯ ಅತಿಥಿಗಳಾಗಿದ್ದರು. ಪಿಡಿಒ ಯು.ಡಿ.ಶೇಖರ್, ಕಾರ್ಯದರ್ಶಿ ಮೋನಪ್ಪ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಮೃತ ಮಹೋತ್ಸವ ಸಮಿತಿಯ ರಾಜೇಶ್ ಎನ್ ಎಸ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಯು ಡಿ ಶೇಖರ್ ಪ್ರಸ್ತಾವಿಕ ಮಾತನಾಡಿದರು.ಅಮೃತ ಮಹೋತ್ಸವ ಸಮಿತಿ ಸಹ ಸಂಚಾಲಕ ರತ್ನಾಕರ ಎಸ್ ವಂದಿಸಿದರು. ಮಹೋತ್ಸವ ಸಮಿತಿ ಸಂಚಾಲಕ ವಿಶ್ವನಾಥ ನಡುತೋಟ ಮತ್ತು ಗ್ರಾ.ಪಂ ಸದಸ್ಯೆ ಭಾರತಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.
75 ಯೋಧರಿಗೆ ಗೌರವಾರ್ಪಣೆ;
ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾಗಿದ್ದು, ಇದರ ಸವಿ ನೆನಪಿಗಾಗಿ ಭವ್ಯ ಸಮಾರಂಭದಲ್ಲಿ ಕಡಬ ಮತ್ತು ಸುಳ್ಯ ತಾಲೂಕಿನ 75 ಯೋಧರನ್ನು ಸನ್ಮಾನಿಸಲಾಯಿತು. ದೇಶ ಸೇವೆ ನೆರವೇರಿಸುತ್ತಿರುವ ಸಂದರ್ಭ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ಮನೆಯವರನ್ನು ಸನ್ಮಾನಿಸಲಾಯಿತು.
ಬೃಹತ್ ಧ್ವಜ ಯಾತ್ರೆ