ಕಳೆದ ಕೆಲವು ದಿನಗಳಿಂದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಭಾರೀ ಹಾನಿಗಳಾಗುತ್ತಿರುವ ಘಟನೆಗಳು ಮುಂದುವರಿದಿವೆ. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವಾಗುವ ಕಾರ್ಯ ಮಾಡುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸೇರಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವಾಗುತ್ತಿದ್ದಾರೆ.
ಸುಳ್ಯ, ದೊಡ್ಡತೋಟ, ಪಂಜ, ಗುತ್ತಿಗಾರು, ನಾಲ್ಕೂರು, ಸುಬ್ರಹ್ಮಣ್ಯ ವಲಯಗಳ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಹಾಗೂ ಸ್ಥಳಿಯರ ಜೊತೆಗೆ ಶ್ರಮಸೇವೆಯಲ್ಲಿ ಕೈ ಜೋಡಿಸುತ್ತಿದ್ದಾರೆ. ಭೀಕರ ಮಳೆಯಿಂದಾಗಿ ಹಲವಾರು ಮನೆಗಳಿಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು, ಬಟ್ಟೆ, ಪೀಠೋಪಕರಣಗಳು ಸೇರಿದಂತೆ ಮುಂತಾದವುಗಳು ಕೆಸರಿನಲ್ಲಿ ಮುಳುಗಿ ಹೋಗಿತ್ತು. ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಹಾಗೂ ಸ್ಥಳಿಯರ ಜೊತೆ ಸೇರಿ ಮನೆಗಳಲ್ಲಿ ಸಿಲುಕಿದ ದಿನಬಳಕೆಯ ವಸ್ತುಗಳು, ಬಟ್ಟೆ ಹಾಗೂ ಪೀಠೋಪಕರಣಗಳನ್ನು ಹೊರತೆಗೆದು ಸ್ಥಳಾಂತರಿಸುವ ಕೆಲಸದಲ್ಲಿ ಭಾಗಿಯಾದರು.
ಗಿರಿಧರ ಅಂಬೆಕಲ್ಲು, ಚಂದ್ರಶೇಖರ ಅಂಬೆಕಲ್ಲು ಅವರ ಮನೆಗಳಿಗೆ ನೀರು ನುಗ್ಗಿ ಮನೆಯ ವಸ್ತುಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಅವುಗಳನ್ನು ಹುಡುಕಿ ಮನೆಯವರಿಗೆ ಒಪ್ಪಿಸಿದರು.
ಕಲ್ಮಕಾರುವಿನಲ್ಲಿ ಚಿದಾನಂದ, ದಿನೇಶ್ ಕೊಪ್ಪಡ್ಕ, ಕೊಲ್ಲಮೊಗ್ರದ ಗಿರಿಯಪ್ಪ ಗೌಡ ಕೋನಡ್ಕ ಅವರುಗಳ ಮನೆ ಸ್ವಚ್ಛ ಮಾಡುವ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಭಾಗಿಯಾದರು. ಅದೇ ರೀತಿ ನೀರು ನುಗ್ಗಿದ ಮನೆಗಳಿಗೆ ತೆರಳಿ ಮನೆಯ ವಸ್ತುಗಳ ಸಾಗಾಟ, ಮನೆಗಳ ಸ್ವಚ್ಛತೆ, ಭಾಧಿತ ಕುಟುಂಬಕ್ಕೆ ಧೈರ್ಯ ತುಂಬುವುದು ಸೇರಿದಂತೆ ಹಲವಾರು ಸೇವಾ ಕಾರ್ಯಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರ ಜೊತೆಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೈ ಜೋಡಿಸುತ್ತಿದ್ದಾರೆ.
✒️ಉಲ್ಲಾಸ್ ಕಜ್ಜೋಡಿ