ಮೇಘಸ್ಪೋಟದಿಂದ ನಲುಗಿ ಹೋಗಿರುವ ಕಲ್ಮಕಾರು ಕೊಲ್ಲಮೊಗ್ರು ಭಾಗದಲ್ಲಿ ಸೇವಾ ಭಾರತಿ, ವಿಶ್ವಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವೀರಕೇಸರಿ ಮಿತ್ರವೃಂದ ಮಂಡೆಕೋಲು ಮೊದಲಾದ ಸಂಘಟನೆಗಳು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡರು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೂ ಶ್ರಮಸೇವೆ ನಡೆಸಿದರು.
ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿರುವಂತೆಯೇ ಪುನಃ ಸುರಿದ ಭಾರಿ ಮಳೆಗೆ ಮೇಲಿನ ಭಾಗದಿಂದ ಅನಿರೀಕ್ಷಿತವಾಗಿ ಹರಿದು ಬಂದ ನೆರೆನೀರಿಗೆ ಕಲ್ಮಕ್ಕಾರು ಕೊಲ್ಲಮೊಗ್ರ ರಸ್ತೆಯಲ್ಲಿ ಆಳೆತ್ತರದಲ್ಲಿ ನೀರು ಉಕ್ಕಿಬಂದ ಪರಿಣಾಮ ಕೆಲಹೊತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಕಾರ್ಯಕರ್ತರು ತೊಂದರೆಗೆ ಸಿಲುಕಿದ ಘಟನೆ ನಡೆಯಿತು. ಆದರೂ ಎದೆಗುಂದದ ಕಾರ್ಯಕರ್ತರು ನೆರೆನೀರು ಸ್ವಲ್ಪ ತಗ್ಗುತ್ತಿದ್ದಂತೆ ರಸ್ತೆಯ ಎರಡು ಬದಿಗೆ ರಕ್ಷಣಾ ಬೇಲಿಯಾಗಿ ನಿಂತು ಒಂದು ಬದಿಯಿಂದ ಇನ್ನೊಂದು ಬದಿಗೆ ವಾಹನ ಹಾಗೂ ಜನರನ್ನು ದಾಟಿಸುವಲ್ಲಿ ಯಶಸ್ವಿಯಾದರು.
ಕಲ್ಮಕ್ಕಾರಿನಲ್ಲಿ ಮೇಘಸ್ಪೋಟದಿಂದಾಗಿ ಭಾರಿ ಗಾತ್ರದ ಮರಗಳ ಸಹಿತ ಹರಿದು ಬಂದಿರುವ ನೀರಿನ ರಭಸಕ್ಕೆ ಸೇತುವೆಯ ಇನ್ನೊಂದು ಬದಿಯ ತೆಂಗಿನ ತೋಟ ಕೊಚ್ಚಿಹೋಗಿ ಹೊಸದಾಗಿ ತೋಡು ನಿರ್ಮಾಣವಾಗಿತ್ತು. ಆ ಪ್ರದೇಶಕ್ಕೆ ಸಂಪರ್ಕ ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಮನೆಗಳಿಗೆ ಸೇವಾಭಾರತಿ ಹಾಗೂ ವೀರಕೇಸರಿ ತಂಡದ ಸದಸ್ಯರು ನೂತನ ತಾತ್ಕಾಲಿಕ ಕಂಗಿನ ಸೇತುವೆ ನಿರ್ಮಾಣ ಮಾಡಿಕೊಟ್ಟರು.
ಹಿಂದೂ ಸಂಘಟನೆಗಳ ಪ್ರಮುಖರಾದ ಮಹೇಶ್ ಕುಮಾರ್ ಮೇನಾಲ, ಸುರೇಶ್ ಕಣೆಮರಡ್ಕ, ರಾಜೇಶ್ ಕಿರಿಭಾಗ, ಶಿವಪ್ರಸಾದ್ ಉಗ್ರಾಣಿಮನೆ, ಮೊದಲಾದವರು ಪರಿಹಾರ ಕಾರ್ಯಾಚರಣೆಯ ನೇತೃತ್ವ ವಹಿಸಿ ಕೆಲಸ ಮಾಡಿದರು.