ಆ.03 ರಂದು ಸಂಜೆ ಸುರಿದ ಭಾರಿ ಮಳೆಗೆ ಅರಂತೋಡು ಗ್ರಾಮದ ಬೆದ್ರುಪಣೆಯಲ್ಲಿನ ಸೇತುವೆಯ ಒಂದು ಬದಿಯ ತಡೆಗೋಡೆ ಮತ್ತು ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಹೊಳೆಯ ಇನ್ನೊಂದು ಬದಿಯ ಹಲವಾರು ಮನೆಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊಳೆ ದಾಟಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಮಸ್ಯೆ ಕೂಡಲೇ ಸ್ಪಂದಿಸಿದ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಅಡಿಕೆ ಮರದ ಪಾಲ ನಿರ್ಮಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ.
ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ಹಾಗೂ ಇನ್ನೊರ್ವ ಸದಸ್ಯೆ ಶ್ರೀಮತಿ ಸುಜಯಾ ಮೇಲಡ್ತಲೆಯವರ ಪತಿ ಲೋಹಿತ್ ಮೇಲಡ್ತಲೆ ಸಹಕಾರ ನೀಡಿದರು. ಈ ಸೇತುವೆಯ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಶೀಘ್ರ ಉತ್ತಮ ಸೇತುವೆ ಹಾಗೂ ಅಡ್ತಲೆಯಿಂದ ಬೆದ್ರುಪಣೆಗೆ ತೆರಳುವ ರಸ್ತೆಯನ್ನು ಸರ್ವೃತು ರಸ್ತೆಯನ್ನಾಗಿ ಅಭಿವೃದ್ಧಿ ಮಾಡಿಕೊಡಬೇಕೆಂದು ಸ್ಥಳೀಯರು ಸರಕಾರವನ್ನು ಆಗ್ರಹಿಸಿದ್ದಾರೆ.