ಭಾರೀ ಮಳೆಯಿಂದಾಗಿ ಕೊಲ್ಲಮೊಗ್ರು ದೋಲನ ಮನೆ ಲಲಿತಾ ಎಂಬುವವರ ಮನೆ ಕುಸಿತಗೊಂಡಿದ್ದು, ಆ.02 ರಂದು ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನಪ್ರತಿನಿಧಿಗಳು, ಮುಖಂಡರು ಜೊತೆಗಿದ್ದರು. ಬಳಿಕ ಅಲ್ಲಿಯೇ ಸಮೀಪದ ದೋಲನ ಮನೆ ಎಂಬಲ್ಲಿ ಹೊಳೆ ಕೊರೆತಕ್ಕೆ ಸಿಲುಕಿ ಅಪಾರ ಹಾನಿಯಾಗಿದ್ದ ಕೃಷಿ ಭೂಮಿಯನ್ನು ವೀಕ್ಷಿಸಿ ಪರಿಹಾರದ ಭರವಸೆ ನೀಡಿದರು.
ಕಂದಾಯ ನಿರೀಕ್ಷಕ ಶಂಕರ್.ಎಂ.ಎಲ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾನಿಯಾದ ಅನೇಕ ಕೃಷಿ ತೋಟಗಳಿಗೆ, ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯಾದ ವರದಿ ಪಡೆದರು.
ಕೃಷಿ ಭೂಮಿ ಮಾಯ :- ಕೊಲ್ಲಮೊಗ್ರು ದೋಲನ ಮನೆ ಎಂಬಲ್ಲಿ ಸುಮಾರು 2.5 ಎಕರೆ ಹೊಳೆ ಕೊರೆತಕ್ಕೆ ಸಿಲುಕಿ ಸುಮಾರು 500 ಕ್ಕೂ ಮಿಕ್ಕಿ ಅಡಿಕೆ ಮರ, ಅಡಿಗೆ ಗಿಡಗಳು ಹೊಳೆಯ ಪಾಲಾಗಿದ್ದು, ಈ ಪ್ರದೇಶ ಸಮುದ್ರದಂತಾಗಿದ್ದು, ಕೃಷಿ ಭೂಮಿ ಮಾಯವಾಗಿದೆ. ಕೃಷಿ ಪಂಪ್ ಸೆಟ್, ಪೈಪ್ ಗಳು ಹೊಳೆಯ ಪಾಲಾಗಿದೆ.
ಹೊಳೆಯಲ್ಲಿ ಕೊಚ್ಚಿ ಬಂದ ಭಾರೀ ಗಾತ್ರದ ಮರಗಳು ತೋಟದ ಒಳಗೆ ನುಗ್ಗಿದ್ದು, ಅಡಿಕೆ ಮರ, ಗಿಡಗಳು ನಾಶವಾದ ದೃಶ್ಯಗಳು ಮನಕಲಕುವಂತಿದೆ. ಅತ್ಯಂತ ಸಣ್ಣ ಕೃಷಿ ಭೂಮಿಯನ್ನು ಹೊಂದಿರುವ ಇಲ್ಲಿನ ರೈತರಿಗೆ ಮುಂದಿನ ಭವಿಷ್ಯದ ಚಿಂತೆಯಾಗಿದೆ.
ವರದಿ :- ಉಲ್ಲಾಸ್ ಕಜ್ಜೋಡಿ