ಮಾಧ್ಯಮ ಜನರ ಧ್ವನಿಯಾಗಿರಬೇಕು ಆಗ ಮಾತ್ರ ಪತ್ರಕರ್ತರು ಸಮಾಜದ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಕಾಸರಗೋಡಿನ ‘ಕಣಿಪುರ’ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕ ಎಂ. ನಾ. ಚಂಬಲ್ತಿಮಾರ್ ಹೇಳಿದರು. ಅವರು ಸುಳ್ಯದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾ.ಪಂ.ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪತ್ರಕರ್ತರು ಸಮಾಜವನ್ನು ಕಟ್ಟಬಲ್ಲ ಯುವ ಶಕ್ತಿಗಳು. ಡಿಜಿಟಲ್ ಮಾಧ್ಯಮಗಳು ಎಷ್ಟೇ ವೇಗವಾಗಿದ್ದರೂ ಪತ್ರಿಕೆಯಲ್ಲಿ ಬಂದ ವರದಿಗೆ ಮಾತ್ರ ಬೆಲೆ ಇಂದಿಗೂ ಇದೆ. ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನಿಟ್ಟು ಯೋಧನಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಜನರ ಪ್ರೀತಿಗೆ ಪಾತ್ರವಾಗಿ ಕೊರೊನ ಕಾಲಘಟ್ಟದಲ್ಲಿ ಬದುಕುವಂತಾಯಿತು. ಮಾಧ್ಯಮಗಳು ದಾರಿ ತಪ್ಪಿದಾಗ ನಾಗರಿಕರು ಹಸ್ತಾಕ್ಷೇಪ ಮಾಡುತ್ತಾರೆ. ಅದಕ್ಕೆ ಅವಕಾಶ ನೀಡದಂತೆ ಕೆಲಸ ಮಾಡಬೇಕಿದೆ. ಸ್ಥಳೀಯ ಭಾಷೆಗಳ ಧ್ವನಿಯಾಗಿ ಮಾಧ್ಯಮ ಕೆಲಸ ಮಾಡುತ್ತಿದೆ. ಮುದ್ರಣ ಮಾಧ್ಯಮ ಹೊಸ ಶೈಲಿಗೆ ಅಪ್ಡೇಟ್ ಆಗುವ ಕಾಲ ಘಟ್ಟದಲ್ಲಿದ್ದು ಪತ್ರಕರ್ತರು ಹೊಂದಿಕೊಳ್ಳಬೇಕಿದೆ ಎಂದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, ರಾಜ್ಯ ‘ಸಹಕಾರಿ ರತ್ನ’ ಪುರಸ್ಕೃತರಾದ ಸೀತಾರಾಮ ರೈ ಸವಣೂರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಚಂದ್ರಾವತಿ ಬಡ್ಡಡ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ್ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಕೃಷ್ಣ ಬೆಟ್ಟ, ಖಜಾಂಜಿ ದಯಾನಂದ ಕೊರತ್ತೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಂಗಾಧರ ಕಲ್ಲಪ್ಪಳ್ಳಿ ಸ್ವಾಗತಿಸಿ, ದುರ್ಗಾಕುಮಾರ್ ನಾಯರ್ ಕೆರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಯಾನಂದ ಕೊರತ್ತೋಡಿ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ, ಗಣೇಶ್ ಮಾವಂಜಿ ನಿರೂಪಿಸಿದರು.