ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ. 26ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ಜರಗಲಿರುವುದು. ಏ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪಂಚವಿಂಶತಿ, ಕಲಶಪೂಜೆ, ಮಧ್ಯಾಹ್ನ ಶ್ರೀದೇವರಿಗೆ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೇವತಾ ಪ್ರಾರ್ಥನೆ ಮತ್ತು ಸೇವಾ ರಂಗಪೂಜೆ ಪ್ರಾರಂಭಗೊಳ್ಳಲಿದ್ದು, ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 7 ಗಂಟೆಯಿಂದ ಶ್ರೀಮಹಿಷಮರ್ದಿನಿ ಯಕ್ಷಗಾನ ಅಧ್ಯಯನ ಕೇಂದ್ರ ಕೇರ್ಪಡದ ವಿದ್ಯಾರ್ಥಿಗಳಿಂದ ಶ್ರೀ ಯಕ್ಷಮಣಿ ಗಿರೀಶ್ ಗಡಿಕಲ್ಲು ರವರ ನಿರ್ದೇಶನದಲ್ಲಿ “ಶ್ರೀ ಮಹಿಷಮರ್ದಿನಿ” ಯಕ್ಷಗಾನ ಬಯಲಾಟ, ಬಳಿಕ ಶ್ರೀ ಮಹಿಷಮರ್ದಿನಿ ಕಲಾಸಂಘ ಕೇರ್ಪಡ ಇವರಿಂದ “ಹಿರಣ್ಯಾಕ್ಷ ವಧೆ” ಯಕ್ಷಗಾನ ಬಯಲಾಟವು ಎಡಮಂಗಲ ಲಕ್ಷ್ಮಣ ಆಚಾರ್ಯರ ನಿರ್ದೇಶನದಲ್ಲಿ ನಡೆಯಲಿರುವುದು. ಅದೇ ದಿನ ಸೇವಾ ರಂಗಪೂಜೆ, ಸಾಮೂಹಿಕ ರಂಗಪೂಜೆಗೆ ಅವಕಾಶವಿದೆ. ಭಕ್ತಾದಿಗಳಿಂದ ಸಭಾಭವನ ರಚನೆ ಮತ್ತು ಅಭಿವೃದ್ಧಿಗೆ ಧನ ಸಹಾಯ ಸ್ವೀಕರಿಸಲಾಗುವುದು. ಪ್ರತಿ ಶುಕ್ರವಾರ ನಡೆಯುವ ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳಬಹುದು. ಪ್ರತಿ ಸಂಕ್ರಮಣದಲ್ಲಿ ರಕ್ತೇಶ್ವರಿ ಗುಡಿಯಲ್ಲಿ ತಂಬಿಲ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಚೌತಿಯಂದು ಗಣಪತಿ ಹವನ, ಮಧ್ಯಾಹ್ನ ಬಲಿವಾಡು ಸೇವೆ, ರಾತ್ರಿ ದುರ್ಗಾಪೂಜೆ ಹಾಗೂ ಪಂಚಮಿ ದಿವಸನಾಗತಂಬಿಲ ಸೇವೆ ನಡೆಯುವುದು. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024