ಪಂಜದ ಸೌದಾಮಿನಿ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ರ 131ನೇ ಜನ್ಮದಿನಾಚರಣೆ ಪ್ರಯುಕ್ತ ಪಂಜ ಜೈ ಭೀಮ್ ಕಾರ್ಮಿಕ ಸಮಿತಿಯ ಆಯೋಜನೆಯಲ್ಲಿ ಜನ್ಮದಿನಾಚರಣೆ ಮತ್ತು ಕಾರ್ಮಿಕ ಶಿಬಿರವನ್ನು ಏ.14ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸುರೇಶ್ ಅಡ್ಡತೋಡು ವಹಿಸಿಕೊಂಡಿದ್ದು, ಕಾರ್ಯಕ್ರಮವನ್ನು ಶ್ರೀಪುರುಷೋತ್ತಮ ದಂಬೇಕೋಡಿ, ನ್ಯಾಯವಾದಿ, ನೋಟರಿ ಪಂಜ ಉದ್ಘಾಟಿಸಿ ಕಾನೂನು ಮಾಹಿತಿಯೊಂದಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಪೂರ್ಣಿಮಾ ದೇರಾಜೆ, ಅಧ್ಯಕ್ಷರು, ಗ್ರಾಮ ಪಂಚಾಯತ್ ಪಂಜ, ಶ್ರೀ ಮೋನಪ್ಪ ಸೌದಾಭಿನಿ, ಅಧ್ಯಕ್ಷರು ಎಸ್ಸಿಎಸ್ಟಿ ಕೈಗಾರಿಕೋದ್ಯಮಿಗಳ ಸಂಘ ಮಂಗಳೂರು ಇವರು ಭಾಗವಹಿಸಿದರು. ಇವರುಗಳು ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಶುಭ ಹಾರೈಸಿದರು. ಕಾರ್ಮಿಕರಲ್ಲಿ ಆರೋಗ್ಯ ಜಾಗೃತಿ ಮಾಹಿತಿಯನ್ನು ಡಾ. ಮಂಜುನಾಥ ಭಟ್, ಆರೋಗ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಇವರು ನೀಡಿ, ಪ್ರಾಥಮಿಕ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸೀತಾರಾಮ ಪಲ್ಲೋಡಿ, ಉಪನ್ಯಾಸಕರು ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿ ಭಾಗವಹಿಸಿ ಡಾ. ಬಿ. ಆರ್ ಅಂಬೇಡ್ಕರ್ ರ ಜೀವನ ಸಾಧನೆಯ ಬಗ್ಗೆ ಉಲ್ಲೇಖಿಸುತ್ತಾ, ಅವರು ಎಲ್ಲಾ ಸಮುದಾಯಗಳಿಗೂ ಸ್ಪೂರ್ತಿಯ ಚೇತನ ಅನ್ನುತ್ತಾ ಅವರ ಧೈರ್ಯ, ಜ್ಞಾನ, ಸಂಘಟನೆ, ಕಾರ್ಯ ಇತ್ಯಾದಿಗಳನ್ನು ಆದರ್ಶವಾಗಿಟ್ಟುಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಕೀರ್ತಿಪ್ರಸಾದ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸಮಿತಿಯ ಕೋಶಾಧಿಕಾರಿ ಶ್ರೀಮತಿ ಜಯಂತಿ, ಸಮಿತಿಯ ಸಂಚಾಲಕರಾದ ಶ್ರೀ ದಾಮೋದರ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆ ಮತ್ತು ಸ್ವಾಗತವನ್ನು ಶ್ರೀ ಚನಿಯ ಪಂಜ, ಕಾರ್ಯದರ್ಶಿ, ಜೈ ಭೀಮ್ ಕಾರ್ಮಿಕ ಸಮಿತಿ ಇವರು ನಿರ್ವಹಿಸಿದರು. ಶ್ರೀ ಗಣೇಶ್ ಕಕ್ಯಾನ ಧನ್ಯವಾದಗಳನ್ನು ಸಮರ್ಪಿಸಿದರು.