ಮುಕ್ಕೂರು : ಮಕ್ಕಳ ಪ್ರತಿಭೆಯನ್ನು ಅರಳಿಸಿ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೇಸಗೆ ಶಿಬಿರ ಉತ್ತಮ ವೇದಿಕೆ ಎಂದು ಈ ಬಾರಿಯ ದೆಹಲಿ ಗಣರಾಜೋತ್ಸವ ಪರೇಡ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಬಹುಮುಖ ಪ್ರತಿಭೆ ಹೇಮಸ್ವಾತಿ ಕುರಿಯಾಜೆ ಹೇಳಿದರು.
ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮುಕ್ಕೂರು ಶಾಲಾ ಹಿತ ಚಿಂತನಾ ಸಮಿತಿ ಹಾಗೂ ಶಾಲಾ ಎಸ್‍ಡಿಎಂಸಿ ವತಿಯಿಂದ ಮುಕ್ಕೂರು ಶಾಲೆಯಲ್ಲಿ ಎ.11 ರಿಂದ 20 ರ ತನಕ ಹಮ್ಮಿಕೊಂಡಿರುವ *ಉಚಿತ ಬೇಸಗೆ ಶಿಬಿರ-ಚಿಣ್ಣರ ಸಂಭ್ರಮ-2022* ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಿಚಾರಗಳನ್ನು ಅರಿತುಕೊಂಡು ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದವರು ಹೇಳಿದರು.
*ಸಭಾಧ್ಯಕ್ಷತೆ ವಹಿಸಿದ್ದ ನೇಸರ ಯುವಕ ಮಂಡಲ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ,* ನೇಸರ, ಗಣೇಶೋತ್ಸವ ಸಂಘಟನೆಯು ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೆರುವಾಜೆ ಗ್ರಾಮದಲ್ಲಿ ಮೊದಲ ಬಾರಿಗೆ ಬೇಸಗೆ ಶಿಬಿರ ಆಯೋಜಿಸಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ದೊರೆತಿರುವುದು ಸಂತಸ ಸಂಗತಿ ಎಂದರು.
*ಜಿಲ್ಲಾ ರೈತ ಪ್ರಶಸ್ತಿ ಪುರಸ್ಕೃತೆ ಶ್ವೇತಾ ಕಾನಾವು ಮಾತನಾಡಿ,* ಪಾಠ, ಮೊಬೈಲ್ ನಿಂದ ದೂರ ಉಳಿದು ಪಠ್ಯೇತರ ಚಟುವಟಿಕೆಯತ್ತ ತೊಡಗಿಕೊಳ್ಳುವಲ್ಲಿ ಬೇಸಗೆ ಶಿಬಿರ ಒಳ್ಳೆಯ ಅವಕಾಶ ಒದಗಿಸುತ್ತದೆ. ಚಿಣ್ಣರ ಸಂಭ್ರಮಕ್ಕೆ ವೇದಿಕೆ ಕಲ್ಪಿಸಿರುವ ಪ್ರಯತ್ನ ಶ್ಲಾಘನೀಯ ಎಂದರು.
*ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ,* ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆ ಹಮ್ಮಿಕೊಂಡಿರುವುದು ಪ್ರಶಂನೀಯ ಕಾರ್ಯ. ಮುಂದಿನ ಏಳು ದಿನಗಳ ಕಾಲ ಮಕ್ಕಳಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಈ ಶಿಬಿರ ವೇದಿಕೆಯಾಗಲಿ ಎಂದರು.
*ಪ್ರಗತಿಪರ ಕೃಷಿಕ, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಮಾತನಾಡಿ,* ಹತ್ತಾರು ಊರಿನ, ಹತ್ತಾರು ಶಾಲೆಯ ಮಕ್ಕಳು ಒಂದು ಕಡೆ ಸೇರಿ ಸಂಭ್ರಮಿಸುವ ಜತೆಗೆ ಪಠ್ಯೇತರ ಸಂಗತಿ ಅರಿಯುವಲ್ಲಿ ಇಂತಹ ಶಿಬಿರ ಅವಕಾಶ ಕಲ್ಪಿಸುತ್ತದೆ. ಇದೊಂದು ಅತ್ಯುತ್ತಮ ಕಾರ್ಯ. ಇದಕ್ಕೆ ನಮ್ಮಲ್ಲೆರ ಬೆಂಬಲ ಇದೆ ಎಂದರು.
*ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ,* ಅಂಕ ಗಳಿಕೆಯ ಜತೆಗೆ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕಾದ ಕಾಲಘಟ್ಟ ಇದಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಕೂಡ ಮುಖ್ಯವಾದದು. ಇದು ಬೇಸಗೆ ಶಿಬಿರದ ಮೂಲಕ ದೊರೆಯಲು ಸಾಧ್ಯವಿದೆ ಎಂದರು.
*ಮುಕ್ಕೂರು ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಅಂಕತಡ್ಕ ಹಿ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ಪಾರ್ವತಿ ಮೋನಪ್ಪ, ಮುಕ್ಕೂರು ಶಾಲಾ ಹಿತ ಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ಎಸ್‍ಡಿಎಂಸಿ ಸದಸ್ಯ ಲೋಕೇಶ್ ಬೀರುಸಾಗು ಉಪಸ್ಥಿತರಿದ್ದರು. ನೇಸರ ಯುವಕ ಮಂಡಲ ಸದಸ್ಯ ರಕ್ಷಿತ್ ಗೌಡ ಒರುಂಕು ಸ್ವಾಗತಿಸಿ, ಶಿಕ್ಷಕಿ ಸರಿತಾ ವಂದಿಸಿದರು. ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ನಿರೂಪಿಸಿದರು.*
*ಸಮ್ಮಾನ ಕಾರ್ಯಕ್ರಮ*
ಈ ಸಂದರ್ಭದಲ್ಲಿ ಹೇಮಸ್ವಾತಿ ಕುರಿಯಾಜೆ ಅವರನ್ನು ಸಂಘಟನೆಯ ವತಿಯಿಂದ ಸಮ್ಮಾನಿಸಲಾಯಿತು. ವಿದ್ಯಾರ್ಥಿನಿ ಪ್ರಿಯಾ ಸಮ್ಮಾನ ಪತ್ರ ವಾಚಿಸಿದರು.
*ಮಕ್ಕಳ ಸಂಭ್ರಮಕ್ಕೆ*
*ತೋರಣ ಕಟ್ಟಿದ ಶಿಬಿರ*
ಪೆರುವಾಜೆ, ಕಲ್ಪತಬೈಲು, ಮುಕ್ಕೂರು, ಚೆನ್ನಾವರ, ಮರ್ಕಂಜ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಶಾಲೆಯ 85 ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡರು. ಪ್ರಥಮ ದಿನ ಸಂಪನ್ಮೂಲ ವ್ಯಕ್ತಿಗಳಾಗಿ ರಂಗಕರ್ಮಿ ಕೃಷ್ಣಪ್ಪ ಬಂಬಿಲ, ಚಿತ್ರಕಲಾ ಶಿಕ್ಷಕ ಧನಂಜಯ ಮರ್ಕಂಜ ಪಾಲ್ಗೊಂಡರು. ನೂರಾರು ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
*ಗೆರೆಟೆಯಲ್ಲಿ ತಯಾರಿಸಿದ*
*ವಸ್ತುಗಳ ಪ್ರದರ್ಶನ*
ಈ ಸಂದರ್ಭದಲ್ಲಿ ಗೆರೆಟೆಯಲ್ಲಿ ತಯಾರಿಸಿದ ವಿವಿಧ ಬಗೆಯ ದಿನ ಬಳಕೆಯ ವಸ್ತುಗಳ ಪ್ರದರ್ಶನ ನಡೆಯಿತು. ಚಿತ್ರಕಲಾವಿದ ಧನಂಜಯ ಮರ್ಕಂಜ ಅವರು ಗೆರೆಟೆ ಬಳಸಿ ಮಾಸ್ಕ್, ಲೋಟ ಸೇರಿದಂತೆ ಹತ್ತಾರು ಬಗೆಯ ಸಾಮಗ್ರಿಗಳನ್ನು ತಯಾರಿಸಿದ್ದು ಇದು ಮಕ್ಕಳ ಮತ್ತು ಪೋಷಕರ ಗಮನ ಸೆಳೆಯಿತು.