ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ ಏಳು ವರ್ಷಗಳ ಹಿಂದೆ ನಡೆದ ಕಾರು ಮತ್ತು ಟಿಪ್ಪರ್ ಅಪಘಾತ ಪ್ರಕರಣದಲ್ಲಿ ಪಂಜ ಭೀಮಗುಳಿ ಕುಟುಂಬದ ಒಂದೇ ಮನೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಟಿಪ್ಪರ್ ಚಾಲಕ ಹಾಗೂ ಮಾಲಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ತೀರ್ಪು ನೀಡಿದ್ದಾರೆ.
2015 ರ ಫೆಬ್ರವರಿ 18 ರಂದು ಸಂಜೆ 5 ಗಂಟೆಯ ವೇಳೆಗೆ ಮರಳು ತುಂಬಿದ ಟಿಪ್ಪರ್ ವಾಹನ ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಪಂಜದ ಲಕ್ಷ್ಮೀನಾರಾಯಣ ಭೀಮಗುಳಿ, ಅವರ ಪುತ್ರ ಜೇಸಿಐ ಪೂರ್ವಾಧ್ಯಕ್ಷ ಅವಿನಾಶ್ ಭೀಮಗುಳಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಈ ಪ್ರಕರಣದ ಆರೋಪಿ, ಟಿಪ್ಪರ್ ಚಾಲಕ ಬೆಳ್ತಂಗಡಿ ಮೂಲದ ಇಸ್ಮಾಯಿಲ್, ಹಾಗೂ ಟಿಪ್ಪರ್ ಮಾಲಕ ಮಹಮ್ಮದ್ ರಫೀಕ್ ಎಂಬವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 3000 ರೂ ದಂಡ ವಿಧಿಸಿ ಎ. 8ರಂದು ತೀರ್ಪು ನೀಡಿದ್ದಾರೆ.
ಆಪಾದಿತ ಟಿಪ್ಪರ್ ಚಾಲಕ ಇಸ್ಮಾಯಿಲ್ ಎಂಬಾತ ಮಂಗಳೂರು ಮೂಲದ ಮಹಮ್ಮದ್ ರಫೀಕ್ ಎಂಬಾತನ ಕೆ ಎ 19 ಡಿ 193 ಟಿಪ್ಪರ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮಂಗಳೂರಿನ ಅಡ್ಯಾರು ನದಿ ದಡದಲ್ಲಿ ಶೇಖರಿಸಿಟ್ಟಿದ್ದ ಹೊಯ್ಗೆ ಯನ್ನು ಕಳವು ಮಾಡಿಕೊಂಡು ಮಾಣಿ-ಮೈಸೂರು ಹೆದ್ದಾರಿ ಮೂಲಕ ಮಡಿಕೇರಿಗೆ ಹೋಗುತ್ತಿದ್ದು,
ಸಂಜೆ ಐದು ಗಂಟೆಯ ಸಮಯದ ವೇಳೆ ಮಡಿಕೇರಿಯಿಂದ ಮಾರುತಿ ಆಲ್ಟೋ ಕಾರಿನಲ್ಲಿ ಸುಳ್ಯದತ್ತ ಬರುತ್ತಿದ್ದ ಅವಿನಾಶ್ ಎಂಬುವವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಈ ವೇಳೆ ಕಾರಿನಲ್ಲಿದ್ದ ಕಾರಿನ ಚಾಲನೆ ಮಾಡುತ್ತಿದ್ದು ಅವಿನಾಶ್ ಭೀಮಗುಳಿ, ಹಾಗೂ ಕಾರಲ್ಲಿದ್ದ ಅವರ ತಂದೆ ಲಕ್ಷ್ಮೀನಾರಾಯಣ ಭೀಮಗುಳಿಯವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅವಿನಾಶ್ ಅವರ ತಾಯಿ ಶ್ರೀಮತಿ ಚೆನ್ನಮ್ಮ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಸಾವಿಗೀಡಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವಿನಾಶ್ ಅವರ ಪುತ್ರ ಅಭಿನಂದನ್ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದರು. ಕಾರಿನಲ್ಲಿದ್ದ
ಶ್ರೀಮತಿ ಭವ್ಯ ರವರಿಗೆ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿತ್ತು.
ಅಪಘಾತ ಸಂಭವಿಸಿದ ಸಂದರ್ಭ ಟಿಪ್ಪರ್ ಚಾಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯದೆ, ಪೊಲೀಸರಿಗೂ ಮಾಹಿತಿ ತಿಳಿಸದೆ ಪರಾರಿಯಾಗಿದ್ದಾನೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿ ಆ ಕುಟುಂಬದವರ ಸಾವಿಗೆ ಕಾರಣರಾದ ಆರೋಪದಲ್ಲಿ ಟಿಪ್ಪರ್ ಚಾಲಕನ ಮೇಲೆ, ವಾಹನ ಚಲಾಯಿಸಲು ಪರವಾನಿಗೆ ಇಲ್ಲದ ವ್ಯಕ್ತಿಗೆ ವಾಹನವನ್ನು ನೀಡಿದ ವಾಹನದ ಮಾಲಕನ ಮೇಲೆ ಕಲಂ 279, 304 (A) 336, 338, 379, ಭಾ. ದಂ ಸಂ ಮತ್ತು ಕಲಂ 134(A),(B) ಜೊತೆಗೆ 3(1) ಜೊತೆಗೆ 181 ಮತ್ತು ಕಲಂ 5(1) ಜೊತೆಗೆ 180 ಐಎಂವಿ ಕಾಯ್ದೆ ಮತ್ತು ಕಲಂ 4(1)(2) ಮೈನ್ಸ್ ಮತ್ತು ಜಿಯಾಲಜಿ ಆಕ್ಟ್ ಅನ್ವಯ ದೂರು ದಾಖಲಿಸಿ ಎಸ್ ಐ ಚಂದ್ರಶೇಖರ್ ಸುಳ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಎ. 8ರಂದು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಆರೋಪಿಗಳಿಗೆ ಎರಡು ವರ್ಷ ಜೈಲು 3000 ರೂ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಜನಾರ್ಧನ್ ವಾದಿಸಿದ್ದರು.