ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ಮಾ.6 ರಂದು ಆಸ್ಪತ್ರೆಯಲ್ಲಿ ನಡೆಯಿತು. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಲಾಯಿತು. ಆಸ್ಪತ್ರೆಯ ಶವಾಗಾರ ಅಭಿವೃದ್ಧಿ ಪಡಿಸಲು ಮತ್ತು ಶವಾಗಾರದಲ್ಲಿ ಶೀತಲೀಕರಣ ಘಟಕ ಸ್ಥಾಪನೆ ಮಾಡಲು ಬೇಡಿಕೆ ಸಲ್ಲಿಸಲು ನಿರ್ಧರಿಸಲಾಯಿತು. ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಪರಿಹರಿಸಲು ಬಾವಿ ಮತ್ತು ಕೊಳವೆ ಬಾವಿ ನವೀಕರಿಸಲು ಮತ್ತು ಹೊಸತಾಗಿ ಒಂದು ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಿಸಲು ನಿರ್ಧರಿಸಲಾಯಿತು. ಆಸ್ಪತ್ರೆಯ ಡಯಾಲಿಸಿಸ್ ಕೊಠಡಿಗೆ ಎಸಿ ಅಳವಡಿಸಲು ನಿರ್ಣಯಿಸಲಾಯಿತು. ಆಸ್ಪತ್ರೆಯ ಎದುರಿನ ರಸ್ತೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಯಿತು. ರಸ್ತೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸಭೆಗೆ ತಿಳಿಸಿದರು. ಆಸ್ಪತ್ರೆಯ ತ್ಯಾಜ್ಯಗಳ ಸಂಸ್ಕರಿಸಲು ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಯಿತು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದು ಸಿಬ್ಬಂದಿಗಳ ನೇಮಕಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗೆ ಬರೆಯಲು ನಿರ್ಧರಿಸಲಾಯಿತು. ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ರೋಗಿಗಳ ಸಹಾಯಕರಾಗಿ ನಿಲ್ಲುವವರಿಗೆ ರಿಯಾಯಿತಿ ದರದಲ್ಲಿ ಆಹಾರ ನೀಡಲು ಸೂಚಿಸಲು ನಿರ್ಧರಿಸಲಾಯಿತು. ಆಸ್ಪತ್ರೆಯಲ್ಲಿ ಸೆಕ್ಯುರಿಟಿ ನೇಮಕಕ್ಕೆ ನಿರ್ಧರಿಸಲಾಯಿತು. ಆಡಿಟ್ ವರದಿಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ,
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ವಿ.ಕರುಣಾಕರ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುನಿಲ್ ಕೇರ್ಪಳ, ಡಾ.ಮನೋಜ್ ಅಡ್ಡಂತ್ತಡ್ಕ, ಡಾ.ವಿದ್ಯಾಶಾರದೆ, ದಾಮೋದರ ಮಂಚಿ, ಸುನಿತಾ ಮೋಂತೆರೊ, ಸುಬ್ರಹ್ಮಣ್ಯ ಕೊಡಿಯಾಲಬೈಲು, ಕೇಶವ ಮಾಸ್ಟರ್ ಹೊಸಗದ್ದೆ , ಗಿರೀಶ್ ಕಲ್ಲುಗದೆ ಉಪಸ್ಥಿತರಿದ್ದರು.
- Thursday
- November 21st, 2024