ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪುಷ್ಯ ಶುದ್ದ ಕಿರುಷಷ್ಠಿಯ ದಿನವಾದ ಜ.8 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಸರಕಾರದ ಮತ್ತು ಜಿಲ್ಲಾಧಿಕಾರಿಗಳ ಕೋವಿಡ್ 19 ಮಾರ್ಗಸೂಚಿಗೆ ಅನುಗುಣವಾಗಿ ನೆರವೇರಿತು.
ತಳಿರು, ತೋರಣ, ಸೀಯಾಳ, ಅಡಿಕೆ,ಬಾಳೆ, ಬಾಳೆಗೊನೆ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ಉತ್ಸವದ ವಿದಿ ವಿಧಾನಗಳನ್ನು ನೆರವೇರಿಸಿದರು.
ಬಳಿಕ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆ ನೆರವೇರಿತು. ಬಳಿಕ ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು. ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿ.ಜಿ.ಎಸ್.ಎನ್.ಪ್ರಸಾದ್, ಶೋಭಾ ಗಿರಿಧರ್, ಲೋಕೇಶ್ ಮುಂಡೋಕಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ ಮರ್ದಾಳ, ಕಿಶೋರ್ ಕುಮಾರ್ ಕೂಜುಗೋಡು ಸೇರಿದಂತೆ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೋವಿಡ್-19 ನಿಯಮದ ಪ್ರಕಾರ ಶ್ರೀ ದೇವರ ರಥೋತ್ಸವ ನೆರವೇರಿತು. ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದೇವಳದ ಸಿಬ್ಬಂದಿಗಳು ಶ್ರೀ ದೇವರ ಕಿರುಷಷ್ಠಿ ರಥವನ್ನು ಎಳೆದು ಕೃತಾರ್ಥರಾದರು. ರಥೋತ್ಸವದ ಸಂದರ್ಭ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಮಾಸ್ಕ್ ಧಾರಣೆ ಮಾಡಿ ಉತ್ಸವದಲ್ಲಿ ಪಾಲ್ಗೊಂಡರು. ಕೋವಿಡ್-19 ನಿಯಮಕ್ಕೆ ಅನುಗುಣವಾಗಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಶ್ರೀ ದೇವರ ರಥೋತ್ಸವ ಸಂಪನ್ನವಾಯಿತು.
ವರದಿ :- ಉಲ್ಲಾಸ್ ಕಜ್ಜೋಡಿ