ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಮಾಡಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ತೆರಳಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಆಶಿರ್ವಾದ ಪಡೆದರು. ಶ್ರೀಗಳು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಡಾ|ನಿಂಗಯ್ಯ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಶ್ರೀವತ್ಸ, ವನಜಾ ಭಟ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಗೃಹ ಸಚಿವರು ರಾಜ್ಯದಲ್ಲಿ ಪೋಲಿಸ್ ಇಲಾಖೆ ಬಲವರ್ಧನೆಗೆ ನಮ್ಮ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಸುಮಾರು 100 ಪೋಲೀಸ್ ಠಾಣೆಗಳ ಹೊಸ ಕಟ್ಟಡವನ್ನು 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ 1 ಕೋಟಿ ರೂಪಾಯಿ ಅನುದಾನ ಇಡಲಾಗಿದೆ. ಸಧ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಪೋಲೀಸರಿಗೆ ಗೃಹ 20-25 ಯೋಜನೆಯಲ್ಲಿ 2025ನೇ ಇಸವಿಯವರೆಗೆ 10 ಸಾವಿರ ಮನೆಗಳ ನಿರ್ಮಾಣವಾಗಲಿದೆ. ಅಲ್ಲಿಗೆ ವಸತಿಗಳ ಸಮಸ್ಯೆ ನಿವಾರಣೆಯಾಗುತ್ತದೆ. ಇಲಾಖೆಯಲ್ಲಿ ವಾರ್ಷಿಕ 4 ಸಾವಿರ ನೇಮಕಾತಿ ನಡೆಸಲಾಗುತ್ತಿದೆ. ಈಗ ಕೇವಲ 12 ಸಾವಿರ ಹುದ್ದೆಗಳು ಖಾಲಿ ಇವೆ ಎಂದರು.
ಗೋಹತ್ಯೆ ನಿಷೇಧ ಕಾಯಿದೆ ಈಗಾಗಲೇ ಜಾರಿಯಲ್ಲಿದ್ದು, ಹೊಸ ಕಾಯಿದೆಯಂತೆ ಪೋಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ, ಸಾರ್ವಜನಿಕರು ಸಹಕರಿಸಬೇಕು ಎಂದರು.
ಉಪ್ಪಿನಂಗಡಿಯ ಇಳಂತಿಲದಲ್ಲಿ ಪತ್ತೆಯಾದ ಗ್ರೆನೇಡ್ ಪ್ರಕರಣದ ತನಿಖೆ ಎಲ್ಲಾ ರೀತಿಯಲ್ಲೂ ನಡೆಯುತ್ತಿದೆ ಎಂದರು.
ಅದೇ ರೀತಿ ಪುನೀತ್ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಪರಿಹಾರವಲ್ಲ. ಪುನೀತ್ ರಾಜ್ ಕುಮಾರ್ ಪ್ರಚಾರ ಪಡೆಯದೇ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಅಂತಹ ಕೆಲಸಗಳನ್ನು ನಾವೆಲ್ಲರೂ ಮಾಡಿಕೊಂಡು ಪುನೀತ್ ಆತ್ಮಕ್ಕೆ ಶಾಂತಿ ಕೋರುವ ಎಂದರು.
ವರದಿ :- ಉಲ್ಲಾಸ್ ಕಜ್ಜೋಡಿ