ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 26ರಂದು ಕೃಷಿ ಕ್ಷೇತ್ರ ಅಧ್ಯಯನ ಪ್ರವಾಸ ಏರ್ಪಡಿಸಿ ಸುಳ್ಯ ಪರಿಸರದ ಕೆಲವು ಕೃಷಿ ಸಾಧಕರನ್ನು ಸಂದರ್ಶಿಸಿ, ಕೃಷಿ ಕ್ಷೇತ್ರ ವೀಕ್ಷಿಸಿ, ಅಲ್ಲಿನ ವಿಶೇಷತೆಗಳನ್ನು ಅವರ ಕೃಷಿ ಸಾಧನೆಗಳನ್ನು ಪರಿಚಯಿಸಿ ಕೊಡಲಾಯಿತು.
ಕೃಷಿ ಕ್ಷೇತ್ರ ಅಧ್ಯಯನದಲ್ಲಿ ಮೊದಲನೆಯದಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕುರಿಯಾಜೆ ತಿರುಮಲೇಶ್ವರ ಭಟ್ ರವರ ನಂದನವನಕ್ಕೆ ಭೇಟಿ ನೀಡಲಾಯಿತು. ಇಲ್ಲಿ ಮನೆಯಂಗಳದಲ್ಲಿ ನಿರ್ಮಿಸಿದ ಬಹುಸುಂದರ ಉದ್ಯಾನವನ, ಬಹುವಿಧದ ದೇಶ ವಿದೇಶಿ ಹಣ್ಣಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಕಳ್ಳಿ ಗಿಡಗಳು, ವಿವಿಧ ಕಲ್ಲುಗಳ ಸಂಗ್ರಹ, ಅಡಿಕೆ, ತೆಂಗು, ಕರಿಮೆಣಸು, ಬಾಳೆ ಇತ್ಯಾದಿ ಬೆಳೆಗಳ ಬಹುಬಗೆಯ ತಳಿಗಳು, ವಿನೂತನ ಕೃಷಿ ಪ್ರಯೋಗಗಳು, ಗಿಡಗಳ ಆರೈಕೆಯಲ್ಲಿ ಕಾಳಜಿ ಇತ್ಯಾದಿ ವೀಕ್ಷಿಸಿ ವಿವರಣೆ ಪಡೆದುಕೊಳ್ಳಲಾಯಿತು.
ಮುಂದೆ ಚೊಕ್ಕಾಡಿ ಸಮೀಪದ ಯುವ ಜೇನು ಕೃಷಿಕ, ಬಿಕಾಂ ಪದವಿ ನಂತರ ತರಬೇತಿ ಪಡೆದುಕೊಂಡು ಜೇನು ಸಾಕಾಣಿಕೆ ಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ಕೀರ್ತನ್ ಶೇಣಿಯವರನ್ನು ಭೇಟಿಯಾಗಿ ಜೇನುಕೃಷಿ ಪ್ರಾರಂಭಿಸಲು ಬೇಕಾದ ಪರಿಕರಗಳು, ನಿರ್ವಹಿಸುವ ವಿಧಾನಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸವಿವರವಾದ ಮಾಹಿತಿ ಪಡೆದುಕೊಳ್ಳಲಾಯಿತು. ಹಾಗೇ ಅಲ್ಲಿ ಮಾಧವ ಗೌಡ ಶೇಣಿಯವರ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತೆರಳಿ, ಕುಕ್ಕುಟ ಉದ್ಯಮ ಪ್ರಾರಂಭ ಮತ್ತು ನಿರ್ವಹಣೆ ಹಾಗೂ ಸರಾಸರಿ ಲಾಭಾಂಶದ ವಿವರಣೆ ಪಡೆದುಕೊಳ್ಳಲಾಯಿತು.
ಮದ್ಯಾಹ್ನ ದುಗ್ಗಲಡ್ಕ ಸಮೀಪ ಹೈನೋದ್ಯಮದಲ್ಲಿ ಯಶಸ್ಸು ಸಾಧಿಸಿರುವ ಪುರುಷೋತ್ತಮ ಕೊಯಿಕುಳಿ ಮತ್ತು ಇವರ ಮಗ ಜೀವಶಾಸ್ತ್ರ ಪದವಿ ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಿಥುನ್ ಕೊಯಿಕುಳಿ ಯವರನ್ನು ಭೇಟಿಯಾಗಿ ಹೈನುಗಾರಿಕೆ ಮತ್ತು ಮಿಶ್ರ ಕೃಷಿ ವೀಕ್ಷಿಸಿ, ಕೃಷಿ ಭಾಗವಾಗಿ ಹೈನೋದ್ಯಮದ ಅಗತ್ಯತೆ ಮತ್ತು ವಿವಿಧ ಪ್ರಯೋಜನಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಪಡೆದುಕೊಳ್ಳಲಾಯಿತು. ಇಲ್ಲಿ ಶಿಬಿರಾರ್ಥಿಗಳೆಲ್ಲರಿಗೂ ಮದ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು.
ಅಪರಾಹ್ನ ಉಬರಡ್ಕ ಸಮೀಪ ರಾಷ್ಟ್ರಪ್ರಶಸ್ತಿ ವಿಜೇತ ಜೇನುಕೃಷಿಕ ಪುಟ್ಟಣ್ಣ ಗೌಡ ಕಾಡುತೋಟ ಮತ್ತು ಮಗ ಹರಿಪ್ರಸಾದ್ ಇವರನ್ನು ಸಂದರ್ಶಿಸಿದಾಗ ಜೇನುಕೃಷಿ ಅವಕಾಶಗಳು ಮತ್ತು ಜೇನುಹುಳಗಳು ಮಕರಂದ ಹೀರುವ ಪರಾಗಸ್ಪರ್ಶ ಪ್ರಕ್ರಿಯೆಯಿಂದ ನಿಸರ್ಗಕ್ಕಾಗುವ ಪ್ರಯೋಜನಗಳನ್ನು ತಿಳಿಸಿದರು. ನಂತರ ಅಲ್ಲಿಂದ ತೆರಳಿ ಪೂಮಲೆ ಅರಣ್ಯದ ತಪ್ಪಲಿನಲ್ಲಿರುವ ಬಡ್ಡೇಕಲ್ಲು ಜಲಪಾತವನ್ನು ವೀಕ್ಷಿಸಿ ಪ್ರಕೃತಿ ರಮಣಿಯತೆಯನ್ನು ಆಸ್ವಾದಿಸಲಾಯಿತು.
ಅಧ್ಯಯನ ಪ್ರವಾಸದಲ್ಲಿ ಭೇಟಿ ನೀಡಿದ ಎಲ್ಲ ಕೃಷಿ ಸಾಧಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಶಿಬಿರದ ನೇತೃತ್ವ ವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಹಾಗೂ ಉಪನ್ಯಾಸಕರಾದ ಅಕ್ಷತಾ ಬಿ, ಭವ್ಯ ಪಿ. ಎಮ್. ಮತ್ತು ಅಜಿತ್ ಕುಮಾರ್ ವಹಿಸಿದ್ದರು. ಕಾಲೇಜು ಸಿಬ್ಬಂದಿ ನವೀನ ಕುಮಾರಿ ಮತ್ತು ಮನುಕುಮಾರ್ ಸಹಕರಿಸಿದರು.
- Thursday
- November 21st, 2024