ಐವರ್ನಾಡು ಮುಚ್ಚಿನಡ್ಕ ಪಾಲೆಪ್ಪಾಡಿ-ಪಾಂಬಾರು-ಅಮಲ-ಪೆರ್ಲಂಪ್ಪಾಡಿ ಮೂಲಕ ಪುತ್ತೂರಿಗೆ ಹೋಗುವ ರಸ್ತೆ ಸುಮಾರು
10-12 ವರ್ಷಗಳಿಂದ ಮರು ಡಾಮರೀಕರಣ ಆಗದೇ ಅವ್ಯವಸ್ಥೆಯಿಂದ ಕೂಡಿದ್ದು ಜನ ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ . ಮೋರಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣದಿಂದ ಮಳೆಗಾಲದಲ್ಲಿ ನೀರೆಲ್ಲಾ ರಸ್ತೆಯಲ್ಲಿ ಹರಿಯುವಂತಾಗಿದೆ . ಬೀದಿ ದೀಪದ ವ್ಯವಸ್ಥೆ ಇಲ್ಲದೇ ರಾತ್ರಿಯ ವೇಳೆ ನಾಗರಿಕರು ಓಡಾಡಲು ಕಷ್ಟಪಡುವಂತಾಗಿದೆ. ಪಾಲೆಪ್ಪಾಡಿ ಎಂಬಲ್ಲಿ ರಸ್ತೆ ಗುಂಡಿಗಳಿಗೆ ಮಣ್ಣು ತಂದು ಹಾಕಿ ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ಅಡಚಣೆಯಾಗಿದೆ.
ಐವರ್ನಾಡಿನಿಂದ ಪೆರ್ಲಂಪಾಡಿ ಹಾಗೂ ಪುತ್ತೂರು ಸಂಪರ್ಕಿಸಲು ಈ ರಸ್ತೆ ಹತ್ತಿರವಾಗಿದ ರಸ್ತೆಯಾಗಿದೆ. ಪಾಲೆಪ್ಪಾಡಿ ಗೋಪಾಲಕೃಷ್ಣ ದೇವಸ್ಥಾನ, ಇರ್ವೆರ್ ಉಳ್ಳಾಕುಲು ದೇವಸ್ಥಾನ ಹಾಗೂ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಮೊದಲು ಬಸ್ಸು, ವ್ಯಾನ್, ಕಮಾಂಡರ್ ಜೀಪ್ ಗಳು ಪ್ರಯಾಣಿಸುತ್ತಿದ್ದು 300ಕ್ಕೂ ಹೆಚ್ಚು ಮನೆಗಳು ಈ ರಸ್ತೆಯನ್ನು ಸಂಚಾರಕ್ಕೆ ಉಪಯೋಗಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಷ್ಟಕರವಾಗಿದ್ದರೂ ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಶೀಘ್ರವಾಗಿ ಅಭಿವೃದ್ಧಿ ಪಡಿಸದಿದ್ದರೇ ಮುಂದಿನ ಚುನಾವಣೆ ಬಹಿಷ್ಕರಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ನಾಗರಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾವಂತಡ್ಕ ರಸ್ತೆಯಲ್ಲಿ ಹಾದು ಹೋಗುವ ರಸ್ತೆ ಬದಿಯಲ್ಲಿ ಕುಸಿತ ವಾಗಿ ಅದರ ಪಕ್ಕದಲ್ಲಿಯೇ ದೊಡ್ಡದಾದ ಕೆರೆಯಿದ್ದು,ಇದು ರಸ್ತೆಯ ತಿರುವಿನಲ್ಲಿಯೇ ಇರುವುದರಿಂದ ಅಪಾಯಕಾರಿ ಪರಿಣಮಿಸಿದೆ.
ಸಚಿವ ಅಂಗಾರರ ಪ್ರಯತ್ನದಿಂದ ಈ ರಸ್ತೆ ಪಿಡಬ್ಲ್ಯೂಡಿ ರಸ್ತೆಯಾಗಿ ಇತ್ತೀಚೆಗೆ ಪರಿವರ್ತನೆಯಾಗಿದ್ದು, ರಸ್ತೆ ಕುಸಿವಾಗಿರುವ ಕಡೆ ತಡೆಗೋಡೆ ನಿರ್ಮಿಸಲು ಮಳೆಹಾನಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಹಾಗೂ ಪಿಡಬ್ಲ್ಯೂಡಿ ರಸ್ತೆಯಾಗಿರುವುದರಿಂದ ಹಂತಹಂತವಾಗಿ ಅಭಿವೃದ್ದಿಯಾಗಲಿದೆ ಎಂದಿದ್ದಾರೆ. ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ರಸ್ತೆಯು 4.2ಕಿ.ಮೀ. ಇದ್ದು ಅಂದಾಜು ಮೂರು ಕೋಟಿ ಅನುದಾನ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದು ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಕೀಲಾಡಿಯವರನ್ನು ಸಂಪರ್ಕಿಸಿದಾಗ ತಿಳಿಸಿದ್ದಾರೆ.