ವೈಯಕ್ತಿಕ ದ್ವೇಷವನ್ನಿಟ್ಟುಕೊಂಡು ತನ್ನ ಸ್ವಾರ್ಥಕ್ಕಾಗಿ ಸಮಾಜಕ್ಕೆ ಊರಿಗೆ ಕೇಡು ಬಯಸುವವರಿಂದ ಗುತ್ತಿಗಾರಿನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಈ ಮೊದಲು ಹೋರಾಟ ನಡೆಸಿದ್ದೇವೆ. ಇನ್ನೂ ಅಂತಹ ಸಂದರ್ಭ ಬಂದಾಗ ರಾಜಕೀಯ ರಹಿತ ಹೋರಾಟಕ್ಕೆ ಸಿದ್ಧ ಎಂದು ಮಾಜಿ ಜಿ.ಪಂ.ಸದಸ್ಯ ಭರತ್ ಮುಂಡೋಡಿ ಹೇಳಿದರು.
ಅವರು ಇಂದು ಗುತ್ತಿಗಾರಿನಲ್ಲಿ ನಡೆದ ನಾಗರಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಗುತ್ತಿಗಾರು ಗ್ರಾಮವನ್ನು ಪುಷ್ಪಗಿರಿ ವನ್ಯಧಾಮಕ್ಕೆ ಸೇರಿಸಲು ಮತ್ತು ಪೇಟೆಯಲ್ಲಿ 40 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಿಸುವಂತೆ ಹೈ ಕೋರ್ಟ್ ಮೆಟ್ಟಿಲೇರಿರುವುದರ ವಿರುದ್ಧವಾಗಿ ಹಾಗೂ ಗೂಂಡಾಗಳನ್ನು ಕರೆತಂದು ಬೆದರಿಸುವ ತಂತ್ರ ಮಾಡುವವರ ವಿರುದ್ಧವಾಗಿ ಗುತ್ತಿಗಾರಿನ ನಾಗರಿಕರು,ವರ್ತಕರು ಸಮಾಲೋಚನಾ ಸಭೆ ನಡೆಸಿದರು.
ವೈಯುಕ್ತಿಕ ಲಾಭಕ್ಕಾಗಿ ದುರುದ್ದೇಶದಿಂದ ಗುತ್ತಿಗಾರು ಗ್ರಾಮ ಬಂಟಮಲೆ ಸಮೀಪದಲ್ಲಿದ್ದು ಪುಷ್ಪಗಿರಿ ವನ್ಯಧಾಮದ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂದು ಗುತ್ತಿಗಾರಿಗೆ ಸಂಬಂಧಪಡದ ಬಾಡಿಗೆ ವ್ಯಕ್ತಿಗಳ ಮುಖಾಂತರ ಕೇಸು ಮಾಡುತ್ತಾರೆ. ಕಟ್ಟಡ ಕಟ್ಟಲು 40 ಮೀ ಅಂತರ ಬೇಕೆಂದು ಕೋರ್ಟಿಗೆ ಕೇಸು ಹಾಕಿಸುತ್ತಾರೆ. ಅಧಿಕಾರಿಗಳು ತನಿಖೆಗೆ ಬರುವಾಗ ಇವರು ಜತೆಗೆ ಗೂಂಡಾಗಳನ್ನು ಕರೆ ತರುತ್ತಾರೆ. ಇದೆಲ್ಲವೂ ನಮ್ಮ ಗುತ್ತಿಗಾರಿನ ಸ್ವಾಭಿಮಾನಕ್ಕೆ ತರುವಂತಹದ್ದಾಗಿದೆ. ಇಂತಹ ಸಂದರ್ಭಗಳಲ್ಲಿ ನಾವು ಕೈ ಕಟ್ಟಿ ಕುಳಿತುಕೊಳ್ಳದೇ ರಾಜಕೀಯ ಬದಿಗಿಟ್ಟು, ಊರಿನ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಹೋರಾಟ ಮಾಡಿದ್ದೇವೆ ,ಇನ್ನೂ ಮಾಡಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿ.ಕೆ.ಬೆಳ್ಯಪ್ಪ ಗೌಡ ಮಾತನಾಡಿ ನ್ಯಾಯಯುತವಾಗಿ ಪ್ರಾಮಾಣಿಕ ವಾಗಿ ನಡೆಯುವವರಿಗೆ ಆಪತ್ತು ಬಂದಾಗ ಅವರ ನೋವುಗಳಿಗೆ ನಾವೆಲ್ಲಾ ಒಗ್ಗಟ್ಟಾಗಿ ಸ್ಪಂದಿಸಬೇಕಾಗಿದೆ ಎಂದರು. ಗ್ರಾ.ಪಂ.ಸದಸ್ಯ ಮಾಯಿಲಪ್ಪ ಕೊಂಬೊಟ್ಟು ಮಾತನಾಡಿ ದಲಿತರನ್ನು ಬಳಸಿಕೊಂಡು ಸುಳ್ಳು ಕೇಸು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಗುತ್ತಿಗಾರಿಗೆ ಬಂದ ಇಂತಹ ಸಮಸ್ಯೆ ಇಲ್ಲಿಗೆ ನಿಲ್ಲದಿದ್ದರೇ ಮುಂದೆ ನಾಗರಿಕರನ್ನು ಸೇರಿಸಿಕೊಂಡು ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದರು. ವರ್ತಕರ ಸಂಘದ ಅಧ್ಯಕ್ಷ ವೆಂಕಟ್ರಮಣ ಕೇಮ್ರೋಳಿ, ಶ್ಯಾಂ ಭಟ್ ಗೊರ್ಗೋಡಿ ಗುತ್ತಿಗಾರಿಗೆ ತೊಂದರೆ ಕೊಡುವವರನ್ನು ಖಂಡಿಸಿ ಮಾತನಾಡಿದರು. ದೇವಿಪ್ರಸಾದ್ ಚಿಕ್ಮುಳಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ 50ಕ್ಕೂ ಮಿಕ್ಕಿ ನಾಗರಿಕರು ಭಾಗವಹಿಸಿದ್ದರು. ಕಿಶೋರ್ ಪೈಕ ಸ್ವಾಗತಿಸಿ, ಸತೀಶ್ ಮೂಕಮಲೆ ವಂದಿಸಿದರು.