ಯುಪಿಎ ಅವಧಿಯಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶದ ಕುರಿತ ಅರ್ಜಿ ಸದ್ಯ ಸುಪ್ರಿಂ ಕೋರ್ಟ್ ನಲ್ಲಿದೆ. ಅಡಿಕೆ ಎಂಬುದು ರಾಸಾಯನಿಕ ಬೆರೆಸದಿದ್ದರೆ ಹಾನಿಕಾರಕವಲ್ಲ. ಅದು ರೋಗ ನಿರೋಧಕ ಶಕ್ತಿ ಹೊಂದಿರುವ ಒಂದು ಉತ್ಪನ್ನ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಇದನ್ನು ಸುಪ್ರಿಂ ಕೋರ್ಟ್ ನಲ್ಲಿ ಸಾಬೀತು ಪಡಿಸಿ ಅಡಿಕೆ ಬೆಳೆಗಾರರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಉತ್ತಮ ವಕೀಲ ರನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಸುಳ್ಯ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಹೊರದೇಶದ ಕಳಪೆ ಗುಣಮಟ್ಟದ ಅಡಿಕೆಯ ಆಮದನ್ನು ಕೇಂದ್ರ ನಿರ್ಬಂಧಿಸಿದ್ದು ಇದು ಅಡಕೆಯ ಧಾರಣೆ ಏರಿಕೆಯಾಗಲು ಕಾರಣವಾಗಿದೆ. ಹಳದಿ ರೋಗದಿಂದ ಈ ಜಿಲ್ಲೆಯ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದು ಇದರ ಪರಿಹಾರಕ್ಕಾಗಿ ಬೇಕಾದ ಸಂಶೋಧನೆಗಾಗಿ ಕೇಂದ್ರ ಪೂರ್ಣ ಸಹಕಾರ ನೀಡಲಿದೆ ಎಂದರು. ಈ ಬಾರಿಯ ಬಜೇಟ್ ನಲ್ಲಿ ಕೇಂದ್ರ ಸರಕಾರ ರೈತರ ಮೂಲಭೂತ ಸೌಕರ್ಯ ಹಾಗೂ ಇತರ ಅಭಿವೃದ್ಧಿ ಗಾಗಿ ೨ ಲಕ್ಷದ ೩೦ ಸಾವಿರ ಕೋಟಿ ರೂಗಳನ್ನು ಇಟ್ಟಿದೆ. ಕಾಂಗ್ರೆಸ್ ಅವಧಿಯಲ್ಲಿ ಈ ಮೊತ್ತ ಕೇವಲ ೨೩ ಸಾವಿರ ಕೋಟಿಯಾಗಿತ್ತು ಎಂದರು. ಕೇಂದ್ರದ ವತಿಯಿಂದ ಹಲವಾರು ಜನಪರ ಯೋಜನೆಗಳು ಬರುತ್ತಿದ್ದು ಅದು ಕೊನೇ ವ್ಯಕ್ತಿಯವರೆಗೂ ತಲುಪುತ್ತಿಲ್ಲ. ಅದಕ್ಕಾಗಿ ಆಯಾ ರಾಜ್ಯ ಭಾಷೆಯಲ್ಲಿ ಯೋಜನೆಗಳನ್ನು ವಿವರಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಕೃಷಿ ಸಚಿವೆಯಾಗಿ ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಸಚಿವ ಎಸ್.ಅಂಗಾರ ಅವರು ಅಭಿನಂಧನೆ ಸ್ವೀಕರಿಸಿ ೭೫ ವರ್ಷಗಳಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಮಾಡಲಾಗದ ಸಾಧನೆಯನ್ನು ಕಳೆದ ಒಂದು ವರ್ಷದಲ್ಲಿ ನಮ್ಮ ಸರಕಾರ ಮಾಡಿದೆ. ಕೋವಿಡ್ ನಿಯಂತ್ರಣ , ಆಕ್ಸಿಜನ್ ಘಟಕ ಸೇರಿದಂತೆ ಮೂಲಭೂತ ಆರೋಗ್ಯ ವ್ಯವಸ್ಥೆಗೆ ಸರಕಾರ ಒತ್ತು ನೀಡಿದೆ ಎಂದರು. ಕಾರ್ಯಕರ್ತರೇ ನಮ್ಮ ದೇವ ದುರ್ಲಭರಾಗಿದ್ದು ಅವರ ಪ್ರಯತ್ನದಿಂದಲೇ ನಾವು ಈ ಮಟ್ಟಕ್ಕೆ ಬೆಳೆದದ್ದು ಎಂದರು.
ಮನವಿ ಸಲ್ಲಿಕೆ: ರಬ್ಬರ್ ತಯಾರಿಕ ಘಟಕ, ತೆಂಗು ಸಂಸ್ಕರಣಾ ಘಟಕ ಹಾಗೂ ತೆಂಗು ಉಪ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪನೆಯಾಗಬೇಕು ಹಾಗೂ ಅಡಿಕೆ ಹಳದಿರೋಗಕ್ಕೆ ಸಂಬಂಧಿಸಿ ಪರಿಹಾರಕ್ಕಾಗಿ ಕೇಂದ್ರದಿಂದ ವಿಶೇಷ ಪ್ಯಾಕೇಜ್ ತರಿಸಬೇಕು ಎಂಬ ಮೂರು ಮನವಿಗಳನ್ನು ಬಿಜೆಪಿ ಮಂಡಲ ಸಮಿತಿ ವತಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಲ್ಲಿಸಲಾಯಿತು.
ರಕ್ಷಾ ಬಂಧನ: ಸಚಿವ ಎಸ್. ಅಂಗಾರ ಹಾಗೂ ಶೋಭಾ ಕರಂದ್ಲಾಜೆ ಅವರು ಒಬ್ಬರಿಗೊಬ್ಬರು ರಾಖಿ ಕಟ್ಟಿ ಸಹೋದರತ್ವದ ಸಂದೇಶ ಸಾರಿದರು. ಸಭೆಯಲ್ಲಿದ್ದ ಎಲ್ಲರೂ ಒಬ್ಬರಿಗೊಬ್ಬರು ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಆಚರಿಸಿದರು.
ಸೇವಾಭಾರತಿ ತಂಡಕ್ಕೆ ಗೌರವಾರ್ಪಣೆ: ಕೋವಿಡ್ ನಿಂದ ಮೃತಪಟ್ಟ ಸುಮಾರು ೧೩೫ ಶವ ಸಂಸ್ಕಾರವನ್ನು ನೆರವೇರೀಸಿದ ಸೇವಾ ಭಾರತಿ ಅವರಿಗೆ ಸಚಿವರ ನೇತೃತ್ವದಲ್ಲಿ ಗೌರವ ಅರ್ಪಿಸಲಾಯಿತು.
ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಅವರು ಅಭಿನಂಧನಾ ಭಾಷಣ ಮಾಡಿದರು.
ಈ ಸಂದರ್ಭ ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ರಾಕೇಶ್ ರೈ, ಮಹಿಳಾ ಕಾರ್ಯಕಾರಿಣಿಯ ಭಾಗೀರಥಿ, ಗುರುದತ್ ನಾಯಕ್, ಎನ್.ಎ ರಾಮಚಂದ್ರ, ವೆಂಕಟ್ ವಳಲಂಬೆ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು.