ಪುತ್ತೂರಿನಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಸನ್ಮಾನ್ಯ ಶೋಭಾ ಕರಂದ್ಲಾಜೆ ಯವರು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಜೇನುತುಪ್ಪವನ್ನು ಇಂದು ಉದ್ಘಾಟಿಸಿ ಮಾರುಕಟ್ಟೆಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕರಾದ ಮಾನ್ಯ ಸಂಜೀವ ಮಠಂದೂರು, ಗ್ರಾಮಜನ್ಯದ ಅಧ್ಯಕ್ಷರಾದ ರಾಮಕೃಷ್ಣ ಭಟ್ ಕುರುಂಬುಡೆಲು, ನಿರ್ದೇಶಕರಾದ ಮೂಲಚಂದ್ರ ಕೆ., ಶಂಕರ ಭಾರದ್ವಾಜ್, ರಾಮಪ್ರತೀಕ ಕರಿಯಾಲ, ಶ್ರೀ ನಂದನ್ ಉಪಸ್ಥಿತರಿದ್ದರು.
ಗ್ರಾಮಜನ್ಯ ಸಂಸ್ಥೆ ಕೃಷಿಕರು ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ಮಾನ್ಯ ಪ್ರಧಾನ ಮಂತ್ರಿಯವರ “ಆತ್ಮನಿರ್ಭರ ಭಾರತ” ಪರಿಕಲ್ಪನೆಯಂತೆ ಪುತ್ತೂರಿನಲ್ಲಿ 2020ರಲ್ಲಿ ಆರಂಭಿಸಿದ ಸಂಸ್ಥೆ “ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ”. ರೈತರೇ ರೂಪಿಸಿರುವ ಸಂಸ್ಥೆಯು ಮೌಲ್ಯವರ್ಧಿತ ಜೇನುತುಪ್ಪವನ್ನು “Gramajanya Honey ” ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ, ಜೇನುಕೃಷಿಯನ್ನು ಕೃಷಿ ಉದ್ದಿಮೆಯನ್ನಾಗಿಸಿಕೊಳ್ಳುವ ಮೂಲಕ ಅಡಿಕೆಯ ಹಳದಿರೋಗ, ಬೇರುಹುಳ ಬಾಧೆಯಿಂದ ತತ್ತರಿಸಿರುವ ಕೃಷಿಯಲ್ಲಿ ಹೊಸ ಆಯಾಮವನ್ನು ರೂಪಿಸುವಲ್ಲಿ ಮೊದಲನೇ ಮೈಲುಗಲ್ಲನ್ನು ತಲುಪಿದೆ.
ಪ್ರಸಕ್ತ ಸಾಲಿನಲ್ಲಿ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಆಸಕ್ತ ಕೃಷಿಕರನ್ನು ಒಗ್ಗೂಡಿಸಿ ಜೇನು ಕೃಷಿಯ ಕ್ಲಸ್ಟರ್ ಗಳನ್ನು ಸ್ಥಾಪಿಸಿ 5000ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಈ ಪ್ರಯುಕ್ತ ಆಸಕ್ತ ಕೃಷಿಕರು ಸಂಸ್ಥೆಯೊಂದಿಗೆ ಕೈಜೋಡಿಸುವಂತೆ ಗ್ರಾಮಜನ್ಯವು ಆಹ್ವಾನಿಸಿದೆ.
ಈ ಸಂಸ್ಥೆಯು ಕೇಂದ್ರ ಸರಕಾರದ ನೂತನ ಒಪ್ಪಂದ ಕೃಷಿಯ ಯೋಜನೆಯಂತೆ ಜೇನು ಖರೀದಿ ಮಾಡುವ ಒಡಂಬಡಿಕೆ ಮಾಡಿಕೊಂಡು ನೇರವಾಗಿ ಕೃಷಿಕರಿಗೆ ಲಾಭವನ್ನು ಒದಗಿಸುವ ಯೋಜನೆಯನ್ನು ರೂಪಿಸಿದ್ದು, ಗ್ರಾಮಮಟ್ಟದಲ್ಲಿ ಆಸಕ್ತ ಕೃಷಿಕರ ಗುಂಪುಗಳನ್ನು ರಚಿಸಿ ಜೇನು ಕೃಷಿಯನ್ನು ವ್ಯವಸ್ಥಿತ ಉದ್ದಿಮೆಯನ್ನಾಗಿಸಲಿದೆ.