ಭಾರತದಲ್ಲಿ ಆಚರಿಸಲಾಗುವ ಪವಿತ್ರ ಹಿಂದೂ ಹಬ್ಬಗಳಲ್ಲಿ ರಕ್ಷಾಬಂಧನವೂ ಒಂದು. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರತೀ ವರ್ಷವೂ ಹೆಚ್ಚು ಕಡಿಮೆ ಆಗಸ್ಟ್ ತಿಂಗಳಲ್ಲಿಯೆ ನಡೆಯುತ್ತದೆ.
ಪ್ರತಿಯೊಬ್ಬ ಸಹೋದರಿಯು ತನ್ನ ಮಾನ,ಪ್ರಾಣ ಸೇರಿದಂತೆ ಸಂಪೂರ್ಣ ರಕ್ಷಣಾ ಜವಾಬ್ದಾರಿಯನ್ನು ಸಾಂಕೇತಿಕವಾಗಿ ತನ್ನ ಸಹೋದರನಿಗೆ ರಾಖಿಯನ್ನು ಕಟ್ಟುವ ಮೂಲಕ ವಹಿಸುತ್ತಾಳೆ. ಇಲ್ಲಿಂದ ಪ್ರತಿಯೊಬ್ಬ ಸಹೋದರನ ಕರ್ತವ್ಯ ಆರಂಭ ಎನ್ನಬಹುದು.
ರಕ್ಷಾ ಬಂಧನದ ಅರ್ಥ ಏನೆಂದರೆ ರಕ್ಷಾ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬುದಾಗಿದೆ.ಈ ಹಬ್ಬವು ಸಹೋದರ ಸಹೋದರಿಯ ನಡುವೆ ಸಂಬಂಧವನ್ನು ಮತ್ತೂ ಗಟ್ಟಿಗೊಳಿಸಿ ಪ್ರೀತಿಯನ್ನು ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತದೆ. ತನ್ನ ಸಹೋದರಿಯ ರಕ್ಷಣೆಗೆ ಸಹೋದರನೋರ್ವ ಕಂಕಣ ಬದ್ಧನಾಗಲಿದ್ದು, ಸಹೋದರಿಯು ಕೂಡ ಸಹೋದರನ ಏಳಿಗೆ ಹಾಗೂ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ರಕ್ಷಾ ಬಂಧನದ ಪದ್ಧತಿ.
-ರಕ್ಷಾಬಂಧನದ ಒಂದು ಇತಿಹಾಸ.
ಭಾರತದಲ್ಲಿ ರಕ್ಷಾ ಬಂಧನ ಹಬ್ಬದ ಪ್ರಾರಂಭಕ್ಕೆ ಸಾಕಷ್ಟು ಇತಿಹಾಸದ ಉದಾಹರಣೆಗಳಿವೆ. ಈ ಪೈಕಿ ಒಂದನ್ನು ತಿಳಿಸಲಾಗಿದೆ. ಚಿತ್ತೂರಿನ ರಾಣಿ ಕರ್ಣಾವತಿಯು ಪತಿಯನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಪತಿಯ ಮರಣದ ಕೆಲವೇ ದಿನಗಳಲ್ಲಿ ಮೊಘಲ್ ವಂಶದ ಚಕ್ರವರ್ತಿ ಬಹದ್ದೂರ್ ಷಾ ಚಿತ್ತೂರಿನ ಮೇಲೆ ದಾಳಿ ನಡೆಸಲು ತಯಾರಿ ನಡೆಸುತ್ತಾನೆ.
ಇದನ್ನು ತಿಳಿದ ಕರ್ಣಾವತಿಯು ರಾಜ ಹ್ಯುಮಾಯೂನನಿಗೆ ನೆರವು ಕೋರುವುದರೊಂದಿಗೆ ಸಹೋದರ ಭ್ರಾತೃತ್ವ ಬೆಸೆಯುವ ಉದ್ಧೇಶದಿಂದ ರಾಖಿಯನ್ನು ಕಳುಹಿಸುತ್ತಾಳೆ.
ಆದರೆ ಹ್ಯೂಮಾಯೂನನ ಸೇನೆ ಚಿತ್ತೂರು ತಲುಪುವ ವೇಳೆ ಬಹದ್ದೂರ್ ಷಾ ಸೇನೆ ಚಿತ್ತೂರಿನ ಮೇಲೆ ದಾಳಿ ನಡೆಸಿದ್ದು, ಮಾನ ರಕ್ಷಣೆಗಾಗಿ ಕರ್ಣಾವತಿ ಆತ್ಮಹತ್ಯೆಗೆ ಶರಣಾದಳು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ರಕ್ಷಾ ಬಂಧನಕ್ಕೆ ಒಂದೆ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಸಹೋದರ ಸಹೋದರಿಯೇ ಆಗಬೇಕೆಂದೇನೂ ಇಲ್ಲ. ರಕ್ತ ಸಂಬಂಧಿಗಳಲ್ಲದ ಮಹಿಳೆಯರು ಇಂದು ಸಹೋದರ ಭಾವನೆಯಿಂದ ಬೇರೆ ಪುರುಷರಿಗೆ ರಾಖಿ ಕಟ್ಟುವ ಮೂಲಕ ಸ್ವಯಂ ಸಹೋದರ ಸಂಬಂಧಿಕತ್ವವನ್ನು ಬೆಸೆದುಕೊಳ್ಳುತ್ತಿದ್ದಾರೆ.
ಬರಹ: ಬಾಲಚಂದ್ರ ಕೋಟೆ