ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಆ.17 ರಂದು ಶಿರಾಡಿ ಘಾಟಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ದೋಣಿಗಲ್ ಪ್ರದೇಶದಲ್ಲಿ ಕುಸಿತಗೊಂಡ ಶಿರಾಡಿ ಘಾಟಿ ರಸ್ತೆಯನ್ನು ವೀಕ್ಷಣೆ ನಡೆಸಿದ ಬಳಿಕ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರು ಶಿರಾಡಿ ಘಾಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಕುಸಿತ ಸಂಭವಿಸುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಶಾಶ್ವತವಾಗಿ ಈ ರಸ್ತೆಯ ಸಮಸ್ಯೆಯನ್ನು ನಿವಾರಣೆ ಮಾಡಬೇಕು. ಇದೇ ರೀತಿ ಸಮಸ್ಯೆ ಮುಂದುವರಿದರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಹೇಳಿದರು.
ಶಿರಾಡಿ ಘಾಟಿ ರಸ್ತೆ ಬಂದ್ ನಿಂದಾಗಿ ಎಷ್ಟೋ ಕೋಟಿ ರೂ. ನಷ್ಟವಾಗಿದೆ. ಮಂಗಳೂರು-ಬೆಂಗಳೂರು ನಡುವೆ ಸರಕು ಸಾಗಾಣಿಕೆ ಇತ್ಯಾದಿಗಳು ಬಂದ್ ಆದ ಕಾರಣ ಚಾಲಕರು ಮತ್ತು ಮಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಸಾರ್ವಜನಿಕರು ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ. ದೋಣಿಗಲ್ ನಲ್ಲಿ ರಸ್ತೆ ಕುಸಿದ ಪ್ರದೇಶದ ಮೇಲ್ಭಾಗದಲ್ಲಿ ಮತ್ತೊಂದು ರಸ್ತೆ ಹಾದುಹೋಗುತ್ತದೆ. ಈ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಜೋಡಣೆ ಮಾಡಬಹುದು. ಈ ಮೂಲಕ ಎರಡು ರಸ್ತೆ ಉಪಯೋಗಿಸಿ ಏಕ ಪಥದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟರೆ ಉತ್ತಮವಿತ್ತು. ಅದಕ್ಕೆ ಬದಲಾಗಿ ರಸ್ತೆ ಬಂದ್ ಮಾಡುವುದರಿಂದ ಅಧಿಕ ನಷ್ಟಕ್ಕೆ ದಾರಿಯಾಗುತ್ತದೆ ಎಂದರು.
ಶೀಘ್ರವೇ ಸಚಿವರು ಮತ್ತು ಜನಪ್ರತಿನಿಧಿಗಳು ಇಲ್ಲಿಗೆ ಆಗಮಿಸಿ ಸ್ಥಳ ವೀಕ್ಷಣೆ ಮಾಡಿ ಇಲ್ಲಿ ಶಾಶ್ವತ ಪರಿಹಾರ ಕಾರ್ಯ ನಡೆಸಿಕೊಡಬೇಕು ಎಂದರು. ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯರಾದ ರವೀಂದ್ರ ಕುಮಾರ್ ರುದ್ರಪಾದ, ಜಯಪ್ರಕಾಶ್ ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.
✍ವರದಿ :- ಉಲ್ಲಾಸ್ ಕಜ್ಜೋಡಿ