ಇಂದಿರಾಗಾಂಧಿ ಅವರು ರಾಷ್ಟ್ರೀಕರಣಗೊಳಿಸಿದ ಹೆಚ್ಚಿನ ಸಂಸ್ಥೆಗಳನ್ನು ಈಗಿನ ಮೋದಿ ಸರಕಾರ ಖಾಸಗೀಕರಣಗೊಳಿಸಿ ಜನಸಾಮಾನ್ಯರನ್ನು ಬೀದಿಗೆ ಬರುವಂತೆ ಮಾಡಿದ್ದಾರೆ. ಈಗ ವಿದ್ಯುತ್ ಅನ್ನು ಕೂಡ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹೊರಟಿದೆ. ಇದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಹೇಳಿದರು.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಇಂದು ಮಾತನಾಡಿದರು.
ಕೃಷಿ ಮಾಡಲು ಈಗ ಉಚಿತ ವಿದ್ಯುತ್ ದೊರೆಯುತ್ತದೆ. ಇದಲ್ಲದೇ ಭಾಗ್ಯಜ್ಯೋತಿ, ಕುಡಿಯುವ ನೀರಿಗೂ ವಿದ್ಯುತ್ ಖಾಸಗೀಕರಣವಾದರೆ ಸಮಸ್ಯೆಯಾಗುತ್ತದೆ. ಅಲ್ಲದೇ ಮೆಸ್ಕಾಂ ನ ಸಾವಿರಾರು ಜನ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಿದರೆ ಕಾಂಗ್ರೆಸ್ ವತಿಯಿಂದ ಮುಂದಿನ ದಿನಗಳಲ್ಲಿ ಜನಾಂದೋಲನವನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.
ಈಗಿನ ಸರಕಾರದ ಸಂಪುಟದಲ್ಲಿ ಮೊಟ್ಟೆ ಹಗರಣದಲ್ಲಿ ಶಾಮೀಲಾಗಿದ್ದ ಶಶಿಕಲಾ ಜೊಲ್ಲೆ ಗೆ ಝೀರೋ ಟ್ರಾಫಿಕ್ ಮೂಲಕ ಪ್ರಮಾಣವಚನಕ್ಕೆ ಆಗಮಿಸಲು ಅವಕಾಶ ಕೊಟ್ಟಿರುವುದು ಅವರ ನೈಜ ಬಣ್ಣವನ್ನು ತೋರಿಸುತ್ತದೆ ಎಂದರು.
ಹಿರಿಯ ನಾಯಕ ಭರತ್ ಮುಂಡೋಡಿ ಅವರು ಮಾತನಾಡಿ ಕರ್ನಾಟಕವನ್ನು ಕರ್ನಾಟಕದ ಜನಪ್ರತಿನಿಧಿಗಳು ಆಳುತ್ತಿಲ್ಲ. ಗುಜರಾತಿನ ಇಬ್ಬರು ನಾಯಕರು ಆಳುತ್ತಿದ್ದಾರೆ. ಈ ರೀತಿಯ ರಾಜಕೀಯವನ್ನು ಕರ್ನಾಟಕದ ಜನ ಗಂಭೀರವಾಗಿ ಪರಿಗಣಿಸಿ ಅವರಿಗೆ ಬುದ್ಧಿ ಕಲಿಸಬೇಕಿದೆ ಎಂದರು.
ಸುಬ್ರಹ್ಮಣ್ಯದ ಅಧ್ಯಾಪಕನೊಬ್ಬ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದರೂ ಆತನಿಗೆ ಒಂದೇ ದಿನದಲ್ಲಿ ಜಾಮಿನು ಲಭಿಸಿದೆ. ಆತ ಆರ್ ಎಸ್ ಎಸ್ ನ ನಂಟು ಹೊಂದಿದ್ದ ಎಂಬ ಕಾರಣಕ್ಕೆ ಆತನ ವಿರುದ್ಧ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಏನೂ ಕ್ರಮ ಕೈಗೊಂಡಿಲ್ಲ. ಇದು ನಾವು ಯಾವ ರೀತಿಯ ಸಮಾಜದಲ್ಲಿ ಇದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಂದರಾಜ ಸಂಕೇಶ, ಕೆ.ಗೋಕುಲದಾಸ್, ಸುರೇಶ್ ಅಮೈ, ಪಿ.ಎಸ್.ಗಂಗಾಧರ ಹಾಗೂ ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.