ಒಬ್ಬ ವ್ಯಕ್ತಿಯ ವರ್ತನೆ ಹಾಗೂ ನಡೆವಳಿಕೆಗಳನ್ನು ಆತನ ವ್ಯಕ್ತಿತ್ವ ಎಂದು ಹೇಳಬಹುದು.
ಈ ಸಮಾಜದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಒಳ್ಳೆಯದಾಗಿದ್ದರೆ ಆ ವ್ಯಕ್ತಿಯನ್ನು ಸಮಾಜ ಗೌರವಿಸುತ್ತದೆ, ಅದೇ ರೀತಿ ವ್ಯಕ್ತಿತ್ವ ಕೆಟ್ಟದಾಗಿದ್ದರೆ ಸಮಾಜ ಎಂದಿಗೂ ಆ ವ್ಯಕ್ತಿಯನ್ನು ಗೌರವಿಸುವುದಿಲ್ಲ.
ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಗುರಿಯನ್ನು ಹೊಂದಿರುತ್ತೇವೆ ಹಾಗೂ ಆ ಗುರಿಯನ್ನು ಈಡೇರಿಸಿಕೊಳ್ಳಲು ಪ್ರತೀದಿನ ಶ್ರಮಪಡುತ್ತಲೇ ಇರುತ್ತೇವೆ.
ನಾವು ನಮ್ಮ ಗುರಿ ಸಾಧನೆಗಾಗಿ ಹೋಗುವ ಸಂದರ್ಭದಲ್ಲಿ ಎಂದಿಗೂ ಕೆಟ್ಟ ದಾರಿಯನ್ನು ಆಯ್ದುಕೊಳ್ಳಬಾರದು, ಏಕೆಂದರೆ ಕೆಟ್ಟ ದಾರಿಯಲ್ಲಿ ಸಾಗಿದರೆ ನಮ್ಮ ವ್ಯಕ್ತಿತ್ವವೂ ಕೂಡ ಹಾಳಾಗಬಹುದು. ಆದ್ದರಿಂದ ಎಷ್ಟೇ ಕಷ್ಟ ಎದುರಾದರೂ, ಎಷ್ಟೇ ಅವಮಾನ-ಅಪಮಾನಗಳು ಎದುರಾದರೂ ನಾವು ಒಳ್ಳೆಯ ದಾರಿಯಲ್ಲಿ ಸಾಗಿದರೆ ನಮ್ಮ ಗುರಿಯನ್ನು ತಲುಪಿದ ನಂತರ ನಮಗೆ ಆಗಿರುವ ಅವಮಾನ-ಅಪಮಾನಗಳೆಲ್ಲಾ ಸನ್ಮಾನಗಳಾಗಿ ಪರಿವರ್ತನೆ ಆಗುತ್ತವೆ. ಅದೇ ರೀತಿ ಒಳ್ಳೆಯ ದಾರಿಯಲ್ಲಿ ಸಾಗಿದರೆ ನಮ್ಮ ವ್ಯಕ್ತಿತ್ವವೂ ಕೂಡ ಎಂದಿಗೂ ಹಾಳಾಗುವುದಿಲ್ಲ. ಆದ್ದರಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ನಾವು ನಮ್ಮ ಒಳ್ಳೆಯ ವ್ಯಕ್ತಿತ್ವವನ್ನು ಎಂದಿಗೂ ಹಾಳುಮಾಡಿಕೊಳ್ಳಬಾರದು.
“ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬ ಮಾತಿನಂತೆ ನಾವು ನಮ್ಮ ಜೀವನದ ಯಾವುದಾದರೂ ಒಂದು ಕ್ಷಣದಲ್ಲಿ ನಮ್ಮ ಒಳ್ಳೆಯ ವ್ಯಕ್ತಿತ್ವವನ್ನು ಕಳೆದುಕೊಂಡರೆ ಆ ವ್ಯಕ್ತಿತ್ವವನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಈ ಸಮಾಜವು ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅದರ ನಡುವೆ ನಾವು ಒಂದು ಕೆಟ್ಟ ಕೆಲಸವನ್ನು ಮಾಡಿದರೆ ನಾವು ಅಲ್ಲಿಯವರೆಗೆ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳನ್ನು ಮರೆತು ಬಿಡುತ್ತದೆ ಹಾಗೂ ನಮ್ಮ ಆ ಒಂದು ಕೆಟ್ಟ ಕೆಲಸವನ್ನು ಮಾತ್ರ ಬೆರಳು ತೋರಿಸಿ ಹೇಳುತ್ತದೆ. ಆದ್ದರಿಂದ ಯಾವುದೇ ಕಷ್ಟದ ಸಂದರ್ಭದಲ್ಲೂ ನಾವು ನಮ್ಮ ಒಳ್ಳೆಯ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳಬಾರದು.
ನಾವು ನಮ್ಮ ಗುರಿ ಸಾಧನೆಗಾಗಿ ಮುನ್ನುಗ್ಗುವ ಸಂದರ್ಭದಲ್ಲಿ ಹಿಂದಿನಿಂದ ನಮ್ಮ ಕಾಲು ಎಳೆಯುವವರು ಇದ್ದೇ ಇರುತ್ತಾರೆ ಅದಕ್ಕೆ ನಾವು ತಲೆಕೆಡಿಸಿಕೊಳ್ಳಬಾರದು ಏಕೆಂದರೆ ನಮ್ಮ ಕಾಲು ಎಳೆಯುವವರು ಯಾವತ್ತಿಗೂ ನಮ್ಮ ಕಾಲಿನ ಕೆಳಗೆ ಇರುತ್ತಾರೆ.
ಸಾಧನೆಯ ಹಾದಿಯಲ್ಲಿ ನಮ್ಮ ಕಾಲು ಎಳೆಯುವವರು ಹತ್ತು ಜನ ಇದ್ದರೆ ನಮ್ಮ ಗುರಿಯ ಸಾಧನೆಗೆ ಬೆಂಬಲ ನೀಡುವವರು ನೂರು ಜನ ಇರುತ್ತಾರೆ. ಆದ್ದರಿಂದ ನಮ್ಮ ಸಾಧನೆಯ ಹಾದಿಯಲ್ಲಿ ನಮಗೆ ಬೆಂಬಲ ನೀಡುವವರನ್ನು ನಾವು ಎಂದಿಗೂ ಮರೆಯಬಾರದು. ಏಕೆಂದರೆ “ಗೆದ್ದ ಮೇಲೆ ಹಾರೈಸುವ ಸಾವಿರ ಚಪ್ಪಾಳೆಗಳಿಗಿಂತ ಗೆಲ್ಲುವ ಮೊದಲು ಬೆನ್ನು ತಟ್ಟುವ ಕೈಗಳೇ ಮೇಲು”
*✍️ಉಲ್ಲಾಸ್ ಕಜ್ಜೋಡಿ*